|ಉಪಯುಕ್ತ ನ್ಯೂಸ್- ಉತ್ಪ್ರೇಕ್ಷೆಯಿಲ್ಲದ ಸುದ್ದಿಗಳ, ಲಕ್ಷಾಂತರ ಓದುಗರ ವಿಶ್ವಾಸಾರ್ಹ ಜಾಲತಾಣ | ಜಾಹೀರಾತುಗಳಿಗಾಗಿ ಸಂಪರ್ಕಿಸಿ- 7019126946
ಉಪಯುಕ್ತ ನ್ಯೂಸ್- ಉತ್ಪ್ರೇಕ್ಷೆಯಿಲ್ಲದ ಸುದ್ದಿಗಳ, ಲಕ್ಷಾಂತರ ಓದುಗರ ವಿಶ್ವಾಸಾರ್ಹ ಜಾಲತಾಣ | ಜಾಹೀರಾತುಗಳಿಗಾಗಿ ಸಂಪರ್ಕಿಸಿ- 7019126946 10,000ಕ್ಕೂ ಅಧಿಕ ಪದಗಳ 'ಹವಿ- ಸವಿ ಕೋಶ' ಹವ್ಯಕ- ಕನ್ನಡ ನಿಘಂಟು ಇದೀಗ ಅಚ್ಚಿನಲ್ಲಿ

10,000ಕ್ಕೂ ಅಧಿಕ ಪದಗಳ 'ಹವಿ- ಸವಿ ಕೋಶ' ಹವ್ಯಕ- ಕನ್ನಡ ನಿಘಂಟು ಇದೀಗ ಅಚ್ಚಿನಲ್ಲಿ



ಹಿರಿಯ ಕವಿ, ಸಾಹಿತಿ, ಶಿಕ್ಷಣ ತಜ್ಞ ಶ್ರೀ ವಿ.ಬಿ ಕುಳಮರ್ವ ಅವರು ರಚಿಸಿದ ಹವ್ಯಕ-ಕನ್ನಡ ನಿಘಂಟು ಇದೀಗ ಮುದ್ರಣಗೊಳ್ಳುತ್ತಿದೆ. ದಶಕಕ್ಕೂ ಹೆಚ್ಚು ವರ್ಷಗಳಿಂದ ಈ ಮಹತ್ವದ ನಿಘಂಟು ರಚನೆಯ ಕಾರ್ಯ ನಡೆದಿದೆ. ಹತ್ತು ಸಾವಿರಕ್ಕೂ ಅಧಿಕ ಪದಗಳು, ಅರ್ಥಗಳು ವಿವರಣೆಗಳನ್ನೊಳಗೊಂಡ ಈ ಕೃತಿ ಕನ್ನಡದ ನಾಡು-ನುಡಿಗೆ ಮಹತ್ವದ ಕೊಡುಗೆಯಾಗುವುದರಲ್ಲಿ ಸಂದೇಹವಿಲ್ಲ.

ನಿಘಂಟು ಕೃತಿ 500ಕ್ಕೂ ಅಧಿಕ ಪುಟಗಳನ್ನು ಒಳಗೊಂಡಿದ್ದು, ಹಿರಿಯ ನಿಘಂಟು ತಜ್ಞ ದಿವಂಗತ ಪ್ರೊ. ಎಂ. ವೆಂಕಟಸುಬ್ಬಯ್ಯ ಅವರ ಶುಭಾಶಯ ಸಂದೇಶವನ್ನು ಒಳಗೊಂಡಿದೆ. ನಿವೃತ್ತ ಪ್ರಾಧ್ಯಾಪಕ, ಹಿರಿಯ ವಿದ್ವಾಂಸ ಪ್ರೊ. ವಿ.ಬಿ ಅರ್ತಿಕಜೆ ಅವರು ಮುನ್ನುಡಿ ಬರೆದಿದ್ದಾರೆ.

ಕೃತಿಯ ಬಗ್ಗೆ ಮುನ್ನುಡಿಕಾರರ ಮಾತುಗಳು ಇಲ್ಲಿವೆ:

ಭಾರತವು ಬಹುಭಾಷಾ ರಾಷ್ಟ್ರವಾಗಿರುವಂತೆ ಕರ್ನಾಟಕವು ಬಹುಭಾಷಾ ರಾಜ್ಯವಾಗಿದೆ. ಕನ್ನಡವು ನಮ್ಮ ರಾಜ್ಯಭಾಷೆಯಾಗಿದ್ದರೂ ಸಹ ಈ ನಾಡಿನಲ್ಲಿ ಅನ್ಯಾನ್ಯ ಹಾಗೂ ವೈವಿಧ್ಯಮಯ ಭಾಷೆಗಳನ್ನಾಡುವ ಜನರಿದ್ದಾರೆ. ಕುಟುಂಬದ ಸದಸ್ಯರು ಮತ್ತು ಬಂಧುಗಳೊಂದಿಗೆ ತಮ್ಮದೇ ಆದ ಉಪಭಾಷೆಯನ್ನಾಡುವ ಮಂದಿ ಸಾರ್ವಜನಿಕವಾಗಿ ಮತ್ತು ವ್ಯಾವಹಾರಿಕವಾಗಿ ಕನ್ನಡವನ್ನು ಬಳಸುತ್ತಾರೆ. ಹಲವಾರು ಭಾಷೆಗಳಿಂದಾಗಿ ಸಂವಹನ ಕಷ್ಟಕರವಾಗಿದೆ ಎಂದು ಕೆಲವರು ಹೇಳಿದರೆ ಇದೇ ಕಾರಣದಿಂದಾಗಿ  ನಮ್ಮ ಸಂಸ್ಕøತಿ-ಸಾಹಿತ್ಯ-ಕಲೆಗಳು ಹಿಗ್ಗಿವೆ, ಬೆಳೆದಿವೆ ಎನ್ನುವುದು ಕೂಡ ಸತ್ಯವೇ.


ಕನ್ನಡದ ಉಪಭಾಷೆಗಳಲ್ಲಿ ಹವಿಗನ್ನಡವು ತನ್ನದೇ ಆದ ವಿಶೇಷತೆಗಳನ್ನು ಹೊಂದಿದೆ. ಹವ್ಯಕ, ಹವೀಕ, ಹೈಗ ಮುಂತಾದ ಹೆಸರುಗಳಿಂದ ಕರೆಯಲ್ಪಡುತ್ತಿದ್ದು ಈ ಭಾಷೆಗೆ ‘ಹವಿಗನ್ನಡ’ ಎಂಬ ಹೆಸರನ್ನು ಕೊಟ್ಟವರು ಕವಿ, ಸಾಹಿತಿ ವೆಂಕಟೇಶ ದೊಡ್ಮನೆಯವರು (1992). ಒಂದು ಶತಮಾನಕ್ಕೂ ಹಿಂದೆ (1887) ಪ್ರಕಟವಾದ ‘ಇಗ್ಗಪ್ಪ ಹೆಗಡೇ ವಿವಾಹ ಪ್ರಹಸನ’ದಿಂದ ತೊಡಗಿ ಇದುವರೆಗೆ ಹಲವಾರು ನಾಟಕಗಳು, ಕಾದಂಬರಿಗಳು, ಕವನಗಳು, ಕಥೆಗಳು, ಹರಟೆಗಳು, ಲೇಖನಗಳು ಮತ್ತು ಹಾಸ್ಯ ಸಂಕಲನಗಳು ಹವಿಗನ್ನಡದಲ್ಲಿ ಬಂದಿದ್ದು ಇವಕ್ಕೆ ಶಿಖರಪ್ರಾಯವಾಗಿ ಬಾಳಿಲ ಪರಮೇಶ್ವರ ಭಟ್ಟರ ‘ಧರ್ಮವಿಜಯ’ ಮಹಾಕಾವ್ಯ ಬೆಳಕು ಕಂಡಿದೆ. ಡಾ. ಹರಿಕೃಷ್ಣ ಭರಣ್ಯರು ‘ಈ ನೆಲದ ಕಂಪು’ ಎಂಬ ಹೆಸರಿನಿಂದ ಹವಿಗನ್ನಡ ಸಾಹಿತ್ಯ ಚರಿತ್ರೆಯನ್ನೂ ದಾಖಲಿಸಿದ್ದಾರೆ. ‘ಹವ್ಯಕ’ ‘ಹವ್ಯಕ ವಾರ್ತೆ’ ಮುಂತಾದ ಪತ್ರಿಕೆಗಳು ಹವಿಗನ್ನಡ ಭಾಷೆ-ಸಾಹಿತ್ಯಗಳ ಪ್ರಗತಿಗೆ ನೆರವಾಗುತ್ತಿವೆ. ಕನ್ನಡದ ಇತರ ಯಾವುದೇ ಉಪಭಾಷೆಗಳಿಗಿಂತ ಹೆಚ್ಚಿನ ಸಾಹಿತ್ಯಕೃಷಿ ಆಗುತ್ತಿರುವುದು ಹವಿಗನ್ನಡದಲ್ಲಿ.


ಯಾವುದೇ ಭಾಷೆಯು ನಿರಂತರವಾಗಿ ಬಳೆಯುತ್ತಾ ಹೋಗಬೇಕಾದರೆ ಶಬ್ದ ಸಂಪತ್ತು ಹೆಚ್ಚಬೇಕು. ಓದುಗರಿಗೆ ಬರೆಹಗಾರರಿಗೆ, ಅಧ್ಯಾಪಕರಿಗೆ, ವಿದ್ಯಾರ್ಥಿಗಳಿಗೆ ಮತ್ತು ಜಿಜ್ಞಾಸುಗಳಿಗೆ ಸಹಕಾರ, ಮಾರ್ಗದರ್ಶನ ನೀಡುವ ನಿಘಂಟುಗಳು ಬರಬೇಕು. ಈ ದೃಷ್ಟಿಯಿಂದ ಹವಿಗನ್ನಡವು ಅದೃಷ್ಟಶಾಲಿ. 1972ರಷ್ಟು ಹಿಂದೆಯೇ ವಿದ್ವಾಂಸರಾದ ಟಿ. ಕೇಶವ ಭಟ್ಟರು ‘ಹವ್ಯಕ ಪದಪರಿಚಯ’ ಎಂಬ ಗ್ರಂಥವನ್ನು ಹೊರತಂದರು. ಇದರಲ್ಲಿ ನೂರಾರು ಹವಿಗನ್ನಡ ಪದಗಳನ್ನು ಸಂಗ್ರಹಿಸಿ ಅಂತ್ಯಾಕ್ಷರ ಲಕ್ಷಿತವಾಗಿ ಶಬ್ದಾರ್ಥಗಳನ್ನು ಕಂದಪದ್ಯಗಳಲ್ಲಿ ಪೋಣಿಸಿ ಕೊಟ್ಟಿದ್ದಾರೆ.


ನಿಘಂಟು ತಜ್ಞರೂ, ಬಹುಭಾಷಾ ವಿದ್ವಾಂಸರೂ ಆದ ಪ್ರೊ| ಮುಂಗ್ಲಿಮನೆ ಮರಿಯಪ್ಪ ಭಟ್ಟರ ‘ಹವ್ಯಕ-ಇಂಗ್ಲಿಷ್ ನಿಘಂಟು’ 1983ರಲ್ಲಿ ಹೊರಬಂತು. ಇದರಲ್ಲಿ ಸಹಸ್ರಾರು ಹವ್ಯಕ ಪದಗಳಿಗೆ ಇಂಗ್ಲಿಷಿನಲ್ಲಿ ಅರ್ಥ ಹಾಗೂ ವಿವರಣೆಯನ್ನೂ ಕೊಟ್ಟಿದ್ದಾರೆ. ಕನ್ನಡ ಮತ್ತು ಜ್ಞಾತಿ ಭಾಷೆಗಳಲ್ಲಿ (ತುಳು, ಮಲಯಾಳ, ತಮಿಳು, ತೆಲುಗು) ಉಪಲಬ್ಧವಿರುವ ಸಮೀಪ ರೂಪಗಳನ್ನು ನೀಡಿದ್ದಾರೆ.


ಇದಕ್ಕಿಂತ ಹೆಚ್ಚು ಶಬ್ದಾರ್ಥಗಳನ್ನು ಒಳಗೊಂಡ ಹವಿಗನ್ನಡ ನಿಘಂಟನ್ನು ವಿದ್ವಾಂಸರೂ ಲೇಖಕರೂ ಆದ ವಿ.ಬಿ. ಕುಳಮರ್ವ ಅವರು ಪರಿಶ್ರಮಪಟ್ಟು ಸಿದ್ಧಗೊಳಿಸಿದ್ದಾರೆ. ಹವಿಗನ್ನಡ ಭಾಷೆ, ಸಾಹಿತ್ಯಗಳು ಅರಳುದಾರಿಯಲ್ಲಿರುವ ಸಂದರ್ಭದಲ್ಲಿ ಈ ಕೃತಿಯು ಹೊರಬರುತ್ತಿರುವುದು ಸ್ವಾಗತಾರ್ಹ ಮತ್ತು ಪ್ರಶಂಸನೀಯ.


ವಿಶೇಷತೆಗಳು:

ಕೋಶದಲ್ಲಿ ಸಹಸ್ರಾರು ಹವಿಗನ್ನಡ ಶಬ್ದಗಳನ್ನು ಅಕಾರಾದಿಯಾಗಿ ಜೋಡಿಸಲಾಗಿದೆ. ಕುಂಬಳೆ ಸೀಮೆ ಮತ್ತು ಸುತ್ತುಮುತ್ತಲಿನ ಪ್ರದೇಶಗಳಲ್ಲಿ ಚಲಾವಣೆಯಲ್ಲಿರುವ ಪದಗಳಿವು. ಶಬ್ದಗಳಿಗೆ ವಿಭಿನ್ನ ರೂಪಗಳಿದ್ದರೆ ಅಲ್ಲಲ್ಲಿಯೇ ಅವನ್ನು ನಮೂದಿಸಲಾಗಿದೆ. ಉದಾ: ಅರಶಿನ, ಅರ್ಶಿನ.

ಪ್ರತಿಯೊಂದು ಶಬ್ದಕ್ಕೂ ಅದರದೇ ಆದ ಅರ್ಥವನ್ನು ನೀಡಲಾಗಿದೆ. ಉದಾ: ಅಗುಡು=ಗೊರಸು; ಅದಾ=ಅಕೋ.

ಅರ್ಥ ಸ್ಪಷ್ಟತೆಗಾಗಿ ಒಂದಕ್ಕಿಂತ ಹೆಚ್ಚು ಸಮಾನಾರ್ಥಗಳನ್ನಿಲ್ಲಿ ಕೊಟ್ಟಿದ್ದಾರೆ. ಉದಾ: ಅಗ್ಗಳ್ಸು=ಅಗ್ಗಳಿಸು, ಘರ್ಜಿಸು, ದೊಡ್ಡ ಸ್ವರ ತೆಗೆದು ಮಾತಾಡು.


ಸ್ಪಷ್ಟನೆಗಾಗಿ ವಾಕ್ಯರೂಪದ ಉದಾಹರಣೆಗಳಿವೆ. ಉದಾ: ಅಗ್ಗುಟ್ಟೆ=ಅಗ್ಗಿಷ್ಟಿಕೆ. ಎನ್ನಜ್ಜಿ ನುಸಿಯ ಓಡ್ಸಲೆ ದಿನಾಗಿಲೂ ಮೂರ್ಸಂದಿಯಪ್ಪಗ ಅಗ್ಗುಟ್ಟೆ ಹಾಕುತ್ತವು.

ಕೇವಲ ಶಬ್ದ ರೂಪದ ಅರ್ಥ ಸಾಲದೆಂದು ತೋರುವಲ್ಲಿ ವಾಕ್ಯರೂಪದ ಅರ್ಥವಿವರಣೆ ನೀಡಲಾಗಿದೆ. ಉದಾ: ಅಚ್ಚು=ಬೆಲ್ಲದ ಅಚ್ಚು, ಪಡಿಯಚ್ಚು, ಮರದಲ್ಲಿ ಅಥವಾ ಲೋಹದಲ್ಲಿ ಬೇಕಾದ ಆಕಾರ ಕೊರೆದು ಕರಗಿಸಿದ ವಸ್ತುವನ್ನು ಬೇಕಾದ ರೂಪಕ್ಕೆ ಪರಿವರ್ತನೆ ಮಾಡಿಕೊಳ್ಳುವ ಸಾಧನ.


ಕೆಲವೆಡೆ ಶಬ್ದವು ಸೂಚಿಸುವ ವಸ್ತುವಿನ ಉಪಯೋಗ ತಿಳಿಸುವ ವಾಕ್ಯವಿದೆ. ಉದಾ: ಅಣಿಲೆ=ಒಂದು ಜಾತಿಯ ಔಷಧಿಯುಕ್ತವಾದ ಮರ ಮತ್ತು ಅದರ ಕಾಯಿ. ಪ್ರಾಚೀನ ಕಾಲದಲ್ಲಿ ಇದರ ಕಾಯಿಗಳಿಂದ ಬರವಣಿಗೆಗೆ ಬೇಕಾದ ಶಾಯಿ ತಯಾರಿಸುತ್ತಿದ್ದರು. ಇದನ್ನು ಅಳಲೆಕಾಯಿ ಅಥವಾ ಕರಕ್ಕಾಯಿ ಎಂದೂ ಕರೆಯುತ್ತಾರೆ.


ಒಂದು ಶಬ್ದಕ್ಕೆ ಒಂದಕ್ಕಿಂತ ಹೆಚ್ಚು ಅರ್ಥಗಳಿದ್ದರೆ ಕ್ರಮಸಂಖ್ಯೆ ಹಾಕಿ ಅರ್ಥಗಳನ್ನು ಬರೆಯಲಾಗಿದೆ. ಉದಾ: ಅಪ್ಪ (1) ಆಗುವ, ಆಗಲಿರುವ. ಉದಾ: ಅಪ್ಪದರ ತಪ್ಪುಸಲೆ ಎಡಿಯ. ಅಪ್ಪ (2) ಅಕ್ಕಿಯ ಹಿಟ್ಟಿಗೆ ತೆಂಗಿನಕಾಯಿ, ಬೆಲ್ಲ, ಏಲಕ್ಕಿ ಇತ್ಯಾದಿಗಳನ್ನು ಸೇರಿಸಿ ತುಪ್ಪ ಅಥವಾ ಎಣ್ಣೆಯಲ್ಲಿ ಕರಿದು ತಯಾರಿಸುವ ಸಿಹಿ ತಿಂಡಿ. ಗಣಪತಿಗೆ ಇಷ್ಟವಾದ ನೈವೇದ್ಯ. ಅಪ್ಪ (3) ಒಪ್ಪಿಗೆ ಸೂಚಿಸುವ; ಸೂಕ್ತವಾದ. ಉದಾ: ಅದು ನಮಗೆ ಅಪ್ಪ ಸಂಬಂಧವೇ ಸರಿ. ಅಪ್ಪ (4) ಆಯಾಸವನ್ನೋ ನೋವನ್ನೋ ಸೂಚಿಸಲು ಬಳಸುವ ಪದ. ಉದಾ: ಅಯ್ಯಪ್ಪ, ಉಳ್ಳಪ್ಪ, ಊವಪ್ಪ, ಉಸ್ಸಪ್ಪ. ಅಪ್ಪ (5) ತಂದೆ, ಪಿತ.


ಕೆಲವೆಡೆ ಅರ್ಥ ಸೌಲಭ್ಯಕ್ಕಾಗಿ ಗಾದೆಯನ್ನೂ ಬಳಸಲಾಗಿದೆ. ಉದಾ: ಅಭಿಮಾನ ಭಂಗ=ಮಾನಹಾನಿ, ಗೌರವಕ್ಕೆ ಕುಂದು. “ಅಲ್ಪರ ಸಂಗ ಅಭಿಮಾನ ಭಂಗ” ಗಾದೆ.

ಉಚಿತವೆನಿಸಿದಲ್ಲಿ ಹವಿಗನ್ನಡ ನುಡಿಗಟ್ಟುಗಳನ್ನು ಕೊಟ್ಟು ಅರ್ಥ ದಾಖಲಿಸಲಾಗಿದೆ. ಉದಾ: ಅಂಡೆದುರುಸು=ಅರೆಹುಚ್ಚ. ಆಶೆಪ್ಪಿನಾರಿ=ಜಿಪುಣಾಗ್ರೇಸರ, ಹೊಟ್ಟೆತುಂಬಾ ಊಟವನ್ನೂ ಮಾಡದೆ ಹಣವನ್ನು ಕಟ್ಟಿಡುವ ವ್ಯಕ್ತಿ. ಪಿಟ್ಟಾಸು.


ಪ್ರಯೋಜನಗಳು:

(1) ಭಾಷಾಭ್ಯಾಸಿ ಜಿಜ್ಞಾಸುಗಳಿಗೆ ಹವಿಗನ್ನಡ ಪದಗಳ ಅರ್ಥ ಮತ್ತು ನಾನಾರ್ಥಗಳನ್ನು ತಿಳಿದುಕೊಳ್ಳಲು ಈ ನಿಘಂಟು ಸಹಕಾರಿಯಾಗಿದೆ. ಒಂದೊಂದೇ ಶಬ್ದದ ಅರ್ಥವನ್ನು ತಿಳಿಯುತ್ತಾ ಹೋದಂತೆ ಆತನ ಶಬ್ದ ಭಂಡಾರವು ಬಳೆಯುತ್ತದೆ. ಭಾಷಾ ಶ್ರೀಮಂತಿಕೆ ಹೆಚ್ಚುತ್ತದೆ.


(2) ಹವಿಗನ್ನಡದಲ್ಲಿ ಕೃತಿರಚನೆ ಮಾಡುವ ಲೇಖಕರಿಗೆ ಯಾವುದೇ ಪದದ ನಿಖರವಾದ ಉಚ್ಚಾರಣೆ ಮತ್ತು ಅರ್ಥವನ್ನು ತಿಳಿದುಕೊಳ್ಳಲು ಕೋಶವು ನೆರವಾಗುತ್ತದೆ.

(3) ಹವಿಗನ್ನಡ ಕೃತಿಗಳನ್ನು ಕನ್ನಡ ಹಾಗೂ ಇತರ ಭಾಷೆಗಳಿಗೆ ಅನುವಾದ ಮಾಡಬಯಸುವ ಉತ್ಸುಕರಿಗೆ ಈ ನಿಘಂಟಿನಿಂದ ಸಾಕಷ್ಟು ಪ್ರಯೋಜನವಿದೆ. ಅದೇ ರೀತಿ ಇತರ ಭಾಷೆಗಳಿಂದ ಹವ್ಯಕಕ್ಕೆ ಭಾಷಾಂತರ ಮಾಡುವಾಗಲೂ ಸಂದೇಹ ಬಂದಲ್ಲಿ ಇದನ್ನು ಗಮನಿಸಬಹುದು.


(4) ಹವಿಗನ್ನಡ ಮಾತೃಭಾಷೆಯಾಗಿರುವ ವಿದ್ಯಾರ್ಥಿಗಳು, ಅಧ್ಯಾಪಕರು ಮತ್ತು ಸಂವಹನಕಾರರು (ಪ್ರವಚನ, ಉಪನ್ಯಾಸ, ವ್ಯಾಖ್ಯಾನ, ವಿವರಣೆ ನೀಡುವವರು) ಸಂದೇಹ ಬಂದಾಗಲೆಲ್ಲ ಈ ಕೋಶದ ನೆರವು ಪಡೆಯಬಹುದು.


(5) ಭಾಷಾ ಶಾಸ್ತ್ರದ ಅಧ್ಯಯನ ಮಾಡುವವರಿಗೆ ಕೂಡ ಕೋಶವು ಉಪಕಾರಿಯಾಗಿದೆ. ಏಕೆಂದರೆ ಹಲವಾರು ಹಿಂದಿ, ಸಂಸ್ಕøತ, ಕನ್ನಡ, ತುಳು ಶಬ್ದಗಳು ಕೊಂಚ ಬದಲಾಗಿ ಹವಿಗನ್ನಡಕ್ಕೆ ಬಂದಿವೆ. ಅಟ್ಟುಂಬೊಳ (ಅಟ್ಟು+ಉಂಬ+ಒಳ) ಮುಂತಾದ ವಿಶಿಷ್ಟ ಪದಗಳು ಭಾಷಾ ಸಮೃದ್ಧಿಯನ್ನು ಹೆಚ್ಚಿಸುತ್ತವೆ.


ಅಭಿನಂದನೆ:

ಈಗಾಗಲೇ ತಮ್ಮ ಕವನ, ಲೇಖನ ಮತ್ತು ಸಾಹಿತ್ಯ ಕೃತಿಗಳ ಮೂಲಕ ಅಂತಾರಾಜ್ಯ ಪ್ರಸಿದ್ಧಿಯನ್ನು ಪಡೆದ ಕುಳಮರ್ವರು ನಾಡಿನ ಒಳಗೂ ಹೊರಗೂ ಸಾವಿರಾರು ವಿದ್ಯಾರ್ಥಿಗಳಿಗೆ, ಆಸಕ್ತರಿಗೆ ವಾಙ್ಮಯ ಕ್ಷೇತ್ರದಲ್ಲಿ ಸೂಕ್ತ ಮಾರ್ಗದರ್ಶನ ಕೊಟ್ಟಿದ್ದಾರೆ. ಅನೇಕರನ್ನು ತಿದ್ದಿ, ತೀಡಿ, ಪ್ರೋತ್ಸಾಹಿಸಿದ್ದಾರೆ. ಸಂಘಟನೆ, ಪ್ರಚಾರ, ಪ್ರಸಾರ, ಪರಿಚಾರಿಕೆಗಳ ಮೂಲಕ ಸೇವೆ ಸಲ್ಲಿಸಿದ್ದಾರೆ.


ಅವರ ಸಾರಸ್ವತ ಕೈಂಕರ್ಯ ಇನ್ನಷ್ಟು ಆಳ-ವಿಸ್ತಾರಗಳನ್ನು ಪಡೆಯಲಿ. ನಾಡಿನ ಸಾಹಿತ್ಯಾಸಕ್ತರು ಅವರ ಕೃತಿಗಳನ್ನು ಕೊಂಡು ಓದಿ ಪ್ರಯೋಜನ ಪಡೆಯಲಿ. ಅವರ ಎಲ್ಲ ಸಾಧನೆಗಳಿಗಾಗಿ ಅಭಿನಂದನೆಗಳು.

-ಪ್ರೊ. ವಿ.ಬಿ. ಅರ್ತಿಕಜೆ

ಪುತ್ತೂರು, ದ.ಕ.

9341414254.


(ಉಪಯುಕ್ತ ನ್ಯೂಸ್)



ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ




0 تعليقات

إرسال تعليق

Post a Comment (0)

أحدث أقدم