"ನಾವು ಮಾಮೂಲಿಯಾಗಿ ಮಾಡುವ ಅಕ್ಕಿ ಶ್ಯಾವಿಗೆಯಂತೆ ಇದನ್ನು ಎರಡು ಸಲ ಬೇಯಿಸಬೇಕಾಗಿಲ್ಲ. ತಯಾರಿ ಬಲು ಸುಲಭ. ದುರಾದೃಷ್ಟ ಎಂದರೆ ನಮ್ಮ ರೈತರಿಗೆ ಯಾರಿಗೂ ಬಾಕಾಶಾ- ಬಾಳೆಕಾಯಿಯಿಂದ ಶಾವಿಗೆ ಮಾಡಬಹುದೆಂದೇ ಗೊತ್ತಿಲ್ಲ."
ಈ ಮಾತು ಹೇಳುವ ಹಿರಿಯ ಕೃಷಿಕ ಶಂಭುಶಂಕರ ರಾವ್ ಉಡುಪಿ ಜಿಲ್ಲೆಯ ಮಂದರ್ತಿಯವರು. ಈಚೆಗೆ ಇವರ ಮುಂಜಾನೆಯ ಉಪಾಹಾರದ ಪಟ್ಟಿಯಲ್ಲಿ ಬಾಳೆಕಾಯಿ ಶಾವಿಗೆ ಸೇರಿದೆ- ಮಹತ್ವದ ಸ್ಥಾನವನ್ನೇ ಪಡೆದಿದೆ.
"ನಮಗೂ ಈಚೆಗೆ ವರೆಗೆ ಗೊತ್ತಿರಲಿಲ್ಲ. ಲಾಕ್ ಡೌನ್ ಕಾಲದಲ್ಲಿ ಬಾಳೆಕಾಯಿಯ ಬೆಲೆ ಬಿತ್ತಲ್ಲಾ. ಅದರಲ್ಲೂ ಮೈಸೂರು ಜಾತಿಯದಕ್ಕೆ ತೀರಾ ಚಿಲ್ಲರೆ ಬೆಲೆ. ’ತರಬೇಡಿ’ ಅನ್ನೋ ಸ್ಥಿತಿಗೂ ಬಂದಿತ್ತು. ಹಾಗೇ ಮನೆಯಲ್ಲಿ ಮಾತಾಡ್ತಾ ಮಾತಾಡ್ತಾ- ಈ ಥರ ಮಾಡಿದರೇನು ಅಂತ ಆಲೋಚನೆ ಬಂತು. ಮಾಡಿದೆವು. ಚೆನ್ನಾಗಿಯೇ ಆಗ್ತದೆ. ಈ ವರೆಗೆ ನಾಲ್ಕೈದು ಸಲ ಮಾಡಿದೆವು. ಇನ್ನು ಮುಂದೆ ಮಾಡುತ್ತಿರುತ್ತೇವೆ", ದನಿಗೂಡಿಸುತ್ತಾರೆ ಮಗ ವಿನೋದ್ ರಾವ್.
ಸೆಪ್ಟೆಂಬರ್ ಎರಡನೆ ತಾರೀಕಿನಂದು ಉಡುಪಿ ಕೇವೀಕೆ ’ತೆಂಗು ದಿನ’ ಆಚರಿಸಿದ್ದು ಇವರ ಮನೆಯಲ್ಲೇ. ಆ ದಿನದ ಉಪಾಹಾರಕ್ಕೆ ಬಾಕಾಶಾ, ಬಾಕಾಹು ಹಲ್ವ! ಎಲ್ಲರಿಗೂ ಇಷ್ಟವಾಯಿತಂತೆ. ಎಷ್ಟು ಜನ ತಾವೇ ಮಾಡಿ ನೋಡಿ ಮುಂದುವರಿಸುತ್ತಾರೋ ಗೊತ್ತಿಲ್ಲ.
"ನಾವಂತೂ ಸಂದರ್ಭ ಸಿಕ್ಕಾಗಲೆಲ್ಲಾ ಹೇಳುತ್ತಲೇ ಇದ್ದೇವೆ", ವಿನೋದ್ ಹೇಳುತ್ತಾರೆ, "ಈಚೆಗೆ ಮಹಾರಾಷ್ಟ್ರದ ಬಾಳೆ ಬೆಳೆಯುವ ಊರಿಗೆ ಹೋಗಿದ್ದೆ. ಅವರಿಗೂ ಹೇಳಿ ಬಂದಿದ್ದೇನೆ."
ವಿನೋದ್ ರಾವ್- 94827 45989 (6- 7 pm)
ಶಂಭುಶಂಕರ ರಾವ್- 98442 99930 (6- 7 pm)
-ಶ್ರೀಪಡ್ರೆ, ಅಡಿಕೆ ಪತ್ರಿಕೆ ಸಂಪಾದಕರು
(ಉಪಯುಕ್ತ ನ್ಯೂಸ್)
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ