"ಅಲ್ಲಿಗೆ ಒಯ್ದ ಬಾಕಾಹು (ಬಾಳೆಕಾಯಿ ಹುಡಿ / ಹಿಟ್ಟು) ತಿಂಡಿಗಳಲ್ಲಿ ಯಾವುದು ಹೆಚ್ಚು ರುಚಿ ಅಂತ ಹೇಳೋಕಾಗೋಲ್ಲ. ಸುಮಾರು ಐವತ್ತು ಜನ ಟೇಸ್ಟ್ ಮಾಡಿದರು. ಯಾವುದೂ ಚೆನ್ನಾಗಿಲ್ಲ ಅಂತ ಯಾರೂ ಹೇಳಿಲ್ಲ. ಹೋಲಿಸಲೇಬೇಕಾದರೆ, ಬಾಕಾಹು ರೈಸ್ ಬಾಲ್ಸ್ ಸ್ಪೆಶಲ್ ಅನಿಸ್ತು. ಅದಕ್ಕೆ ಹೆಚ್ಚು ಮಾರ್ಕು ಕೊಡುತ್ತೇನೆ. ಬೋಂಡಾ ತರಾನೇ, ಪಲ್ಯ ಮಾಡಿ ಹೋಳಿಗೆಯ ಕಣಕ ತುಂಬಿದ ಹಾಗೆ ಬಾಕಾಹು ಕಣಕದಲ್ಲಿ ತುಂಬಿ ರೈಸಿನಲ್ಲಿ ಹೊರಳಿಸಿ ಉಗಿಯಲ್ಲಿ ಬೇಯಿಸೋದು."
ಇದು ಶಿರಸಿಯ ಉಮ್ಮಚಗಿಯ ನಯನಾ ಹೆಗಡೆ ಅವರ ಮಾತು. ರಾಜ್ಯ ಕೃಷಿ ಸಚಿವರ ಭೇಟಿ ಹಿನ್ನೆಲೆಯಲ್ಲಿ ಶಿರಸಿ ಕೇವೀಕೆ ಬಾಕಾಹು ಉತ್ಪನ್ನಗಳ ಪ್ರದರ್ಶನ ನಡೆಸಿ ಸಚಿವರಿಗೆ ಈ ಬಗ್ಗೆ ತಿಳಿವಳಿಕೆ ನೀಡಿತು.
ನಯನಾ ಇದಕ್ಕಾಗಿಯೇ ಏಳು ಬಾಕಾಹು ಉತ್ಪನ್ನ ತಯಾರಿಸಿ ಒಯ್ದಿದ್ದರು. ಲಡ್ಡಿಗೆ, ಹೋಳಿಗೆ, ಕಡುಬು, ರೋಲ್ಸ್, ಬಾಕಾಹು ಬಾಲ್ಸ್, ಧೋಕ್ಲಾ ಮತ್ತು ಪಕೋಡ ಈ ಸಪ್ತ ಸವಿರುಚಿಗಳು.
ಇವರು ಎರಡನೆಯ ಸ್ಥಾನ ಕೊಡುವುದು ಪಕೋಡಕ್ಕೆ. "ಬಾಳೆಕಾಯಿ ತುರಿದು, ಅದಕ್ಕೆ ಬಾಕಾಹು ಸೇರಿಸಿ, ಮಸಾಲೆ ಮಿಶ್ರಮಾಡಿದ ತಿಂಡಿ ಇದು. ಗರಿಗರಿಯಾಗಿ ಇರುತ್ತೆ. ಒಂದು ವಾರದ ವರೆಗೂ ಇಡಬಹುದು."
ಮೂರನೆಯ ಆಯ್ಕೆ ಹೋಳಿಗೆ. "ಕಡ್ಲೆ ಹೋಳಿಗೆ ಥರಾನೇ. ತುಂಬ ಟೇಸ್ಟ್" ಇನ್ನೊಂದು ರೋಲ್ ಅಂತ. ರವೆ ಮತ್ತು ಬಾಕಾಹು ಹಿಟ್ಟು ಸೇರಿಸಿ ಉಗಿಯಲ್ಲಿ ಬೇಯಿಸಿರುವ ತಿಂಡಿ. ಅದಕ್ಕೆ ಬೆಳ್ಳುಳ್ಳಿ ಮಸಾಲೆ ತುಂಬಿ ಒಗ್ಗರಣೆ ಮಾಡಿದ್ದೆ" ಎನ್ನುತ್ತಾರೆ ನಯನಾ.
-ಶ್ರೀಪಡ್ರೆ, ಅಡಿಕೆ ಪತ್ರಿಕೆ ಸಂಪಾದಕರು
(ಉಪಯುಕ್ತ ನ್ಯೂಸ್)
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ