ದ.ಕ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪಡೆದ ಬಹುಮುಖ ಬಾಲಪ್ರತಿಭೆ ಚಿತ್ತರಂಜನ್ ಕಡಂದೇಲು

Upayuktha
0

ಕರಾವಳಿ ಕರ್ನಾಟಕದ ಜಾನಪದ ಕಲೆ ಯಕ್ಷಗಾನ. ಕಲಾವಿದರ ಅರ್ಥಗರ್ಭಿತ ಮಾತು, ಭಾಗವತರ ಸಿರಿ ಕಂಠದ ಗಾನ- ಗಾಯನ, ಚೆಂಡೆ- ಮದ್ದಳೆಗಳ ಶಬ್ದ ಕೇಳಿಸುತ್ತಿದ್ದರೆ ಮೈಮನ ನಿಮಿರುವುದು. ಹೆಜ್ಜೆಯ ಸದ್ದಿಗೆ ಕಿವಿಗುಳಿಂಪಾಗುವವು, ಹಾಕುವ ದಿಗಿಣಗಳು ಕನ್ಮಣಗಳಿಗೆ ರೋಮಾಂಚನಕಾರಿ, ಇಂತಹ ಕ್ಷೇತ್ರದಲ್ಲಿ ಸಾಧನೆ ಮಾಡಲು ಹೊರಟವನು ಚಿತ್ತರಂಜನ್ ಕಡಂದೇಲು.


ಇವನು ಮೂಲತಃ ಪುತ್ತೂರು ತಾಲೂಕಿನ ಪಾಣಾಜೆ ಗ್ರಾಮದ ಕಡಂದೇಲು ಮನೆತನದವನಾಗಿದ್ದು ಕೇರಳದ ಕಾಸರಗೋಡಿನ ಪೆರಡಾಲದ ನಿವಾಸಿಯಾಗಿರುವ ಶ್ರೀ ಹರೀಶ್ ಕುಮಾರ್ ಹಾಗೂ ಜ್ಯೋತ್ಸ್ನಾ ದಂಪತಿಗಳ ಸುಪುತ್ರ. ಪ್ರಸ್ತುತ ಪೆರಡಾಲದ ನವಜೀವನ ಪ್ರೌಢಶಾಲೆಯಲ್ಲಿ ಎಂಟನೇ ತರಗತಿಯಲ್ಲಿ ಕಲಿಯುತ್ತಿದ್ದಾನೆ. ದ. ಕ. ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ, ನಾಟ್ಯಗುರು ಸಬ್ಬಣಕೋಡಿ ರಾಮ ಭಟ್ಟರ ಶಿಷ್ಯ. ಇವರು ತಮ್ಮ ಗುರುವಿನ ಹೆಸರಲ್ಲಿ ಸ್ಥಾಪಿಸಿದ, ಪಡ್ರೆ ಚಂದು ಸ್ಮಾರಕ ಯಕ್ಷಗಾನ ನಾಟ್ಯ ತರಬೇತಿ ಕೇಂದ್ರ (ರಿ) ಪೆರ್ಲ (ಪೇಜಾವರ ವಿಶ್ವೇಶತೀರ್ಥ ಪ್ರಶಸ್ತಿ ಪುರಸ್ಕೃತ -ಸಂಸ್ಥೆ)– ಈ ಸಂಸ್ಥೆಯಲ್ಲಿ ತನ್ನ 5ನೇ ವಯಸ್ಸಿನಲ್ಲಿಯೇ ಯಕ್ಷಗಾನ ತರಗತಿಗೆ ಸೇರ್ಪಡೆಗೊಂಡು ಬಹಳ ಬೇಗನೆ ಪ್ರಾಥಮಿಕ ಹೆಜ್ಜೆಗಾರಿಕೆಗಳನ್ನು ಕಲಿತುಕೊಂಡಿದ್ದಾನೆ. ಇದೀಗ ಕೇಂದ್ರದ ಮಕ್ಕಳ ಮೇಳದಲ್ಲಿ ಅನೇಕ ವೇದಿಕೆಗಳಲ್ಲಿ ಪ್ರದರ್ಶನ ನೀಡಿರುತ್ತಾನೆ.


ಸಂಸ್ಕೃತ ಕಂಠಪಾಠದಲ್ಲಿ ಉಪಜಿಲ್ಲಾ ಹಾಗೂ ಜಿಲ್ಲಾ ಮಟ್ಟಗಳಲ್ಲಿ ಬಹುಮಾನಗಳನ್ನು ಪಡೆದಿದ್ದಾನೆ. ಅದೇ ರೀತಿ ಏಕಪಾತ್ರಾಭಿನಯ, ಕನ್ನಡ ಕಂಠಪಾಠ, ವಂದೇ ಮಾತರಂ, ಸಂಸ್ಕೃತ ಕಥಾಕಥನಂ ಗದ್ಯಪಾರಾಯಣಂ ಮೊದಲಾದ ಸ್ಪರ್ಧೆಗಳಲ್ಲಿ ಉಪಜಿಲ್ಲಾ ಮಟ್ಟದಲ್ಲಿ “ಎ” ಗ್ರೇಡನ್ನು ಪಡೆದಿದ್ದಾನೆ. ಬಲ್ಲಿರೇನಯ್ಯ ಮಾಸಪತ್ರಿಕೆಯವರು ಎಡನೀರು ಮಠದಲ್ಲಿ ನಡೆಸಿದ ಜಿಲ್ಲಾಮಟ್ಟದ (ಸುಮಾರು 40/45 ಜನ ಭಾಗವಹಿಸಿದ) ಯಕ್ಷಗಾನ ಕುಣಿತ ಸ್ಪರ್ಧೆಯಲ್ಲಿ ಎಡನೀರು ಶ್ರೀ ಕೇಶವಾನಂದ ಭಾರತಿ ಸ್ವಾಮೀಜಿ, ಕಲಾಪೋಷಕರಾದ ಶ್ಯಾಮ್ ಭಟ್ ಮೊದಲಾದ ಗಣ್ಯರ ಸಮ್ಮುಖದಲ್ಲಿ ಬಹುಮಾನವನ್ನು ಪಡೆದಿದ್ದಾನೆ.

    

ಇವನ ಪ್ರತಿಭೆಯನ್ನು ಗುರುತಿಸಿ ದ.ಕ.ಜಿಲ್ಲಾ ಸಾಹಿತ್ಯ ಪರಿಷತ್ತು ಮಂಗಳೂರು ಇವರು ಕಳೆದ ವರ್ಷ ದ.ಕ.ಜಿಲ್ಲಾ ರಾಜ್ಯೋತ್ಸವ ಸಾಧಕ ಪುರಸ್ಕಾರವನ್ನು ನೀಡಿ ಗೌರವಿಸಿದ್ದಾರೆ. ಅದಲ್ಲದೆ ಪ್ರಸ್ತುತ  ಶ್ರೀ ಮಾಣಿಲ ಯಕ್ಷಗಾನ ಮೇಳದ ಬಾಲ ಕಲಾವಿದಬಾಗಿ ಕಾರ್ಯ ನಿರ್ವಹಿಸುತ್ತಿದ್ದಾನೆ.


ಕಳೆದ ವರ್ಷ ಲಾಕ್ ಡೌನ್ ನಲ್ಲೂ ಯಕ್ಷಾಂತರಂಗ ಯುಟ್ಯೂಬ್ ಚಾನೆಲ್ ಮೂಲಕ ಯಕ್ಷಗಾನ ಪ್ರಿಯರ ಗಮನ ಸೆಳೆದಿದ್ದ ಇವನ ಪ್ರತಿಭೆಯನ್ನು ನೋಡಿ ಮೆಚ್ಚಿಕೊಂಡು ಬೆಳ್ತಂಗಡಿ ತಾಲೂಕು ಮಚ್ಚಿನ ಶ್ರೀ ಮೊರಾರ್ಜಿ ದೇಸಾಯಿ ವಸತಿ ಶಾಲೆಯ ಅಧ್ಯಾಪಕರಾದ ಶ್ರೀ ಸುಧೀಂದ್ರ ಎಂಬವರು ಮನೆಗೆ ಬಂದು ಅಭಿನಂದನೆ ಸಲ್ಲಿಸಿದ್ದು ಈ ಬಾಲಕನ ಪ್ರತಿಭೆಗೆ ಸಂದ ಪುರಸ್ಕಾರವಾಗಿದೆ. ಈ ಬಾಲಕನ ಯಕ್ಷಪ್ರತಿಭೆ ಇನ್ನೂ ಜಗದಗಲ ಬೆಳಗಲಿ ಎಂದು ಹಾರೈಸೋಣ.

-ನಿರಂಜನ್ ಕಡಂದೇಲು


(ಉಪಯುಕ್ತ ನ್ಯೂಸ್)



ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ



Post a Comment

0 Comments
Post a Comment (0)
Maruti Suzuki Festival of Colours
Maruti Suzuki Festival of Colours
To Top