ಅಲರ್ಜಿ ಶೀತದ ನಿಯಂತ್ರಣಕ್ಕೆ ಯೋಗ ಮುದ್ರೆಗಳು

Upayuktha
0

ಅಲರ್ಜಿ ಶೀತದಿಂದ ಬಳಲುತ್ತಿರುವವ ಸಂಖ್ಯೆಯು ಹೆಚ್ಚಾಗುತ್ತಿದೆ. ಸೈನಸೈಟಸ್ ಅಲರ್ಜಿ, ಮೂಗು ಸೋರುವಿಕೆ, ಸೀನು ಇತ್ಯಾದಿ ಆರೋಗ್ಯ ಅಲರ್ಜಿ ತೊಂದರೆಗಳು ಇಂದು ಸಾಮಾನ್ಯವಾಗಿ ಬಿಟ್ಟಿದೆ. ರೋಗ ನಿರೋಧಕ ವ್ಯವಸ್ಥೆಯಲ್ಲಿ ವ್ಯತ್ಯಾಸವಾದಾಗ ಅಲರ್ಜಿ ಉಂಟಾಗುತ್ತದೆ. ಅದರಲ್ಲಿ ಮುಖ್ಯವಾಗಿ ಅಲರ್ಜಿಗೆ ಕಾರಣವಾಗುವ ಕೆಲವು ವಸ್ತುಗಳು ಈ ರೀತಿಯಾಗಿದೆ. ಉದಾ:- ಧೂಳು, ಸರಾಗ, ಹೊಗೆ, ಕೆಲವು ಆಹಾರಗಳು, ರಸಾಯನಿಕಗಳು, ಸುವಾಸನೆ ಇತ್ಯಾದಿಗಳು.


ದೇಹದಲ್ಲಿ ಪ್ರತಿರಕ್ಷಣಾ ವ್ಯವಸ್ಥೆಯು ಬಲಗೊಳ್ಳಲು ಯೋಗ ಪ್ರಾಣಾಯಾಮ ಸಹಕಾರಿಯಾಗಿದೆ. ಯೋಗ ಪ್ರಾಣಾಯಾಮ ಅಭ್ಯಾಸ ಮಾಡಿದಾಗ ಅಲರ್ಜಿಯನ್ನು ತಡೆಗಟ್ಟುವ ಸಾಮರ್ಥ್ಯ ಉಂಟಾಗುತ್ತದೆ. ಯೋಗಾಸನಗಳಿಂದ ದೇಹದ ಒಳಗಿನ ಅಂಗಕ್ಕೆ ವ್ಯಾಯಾಮ ದೊರಕಿ, ರಕ್ತ ಸಂಚಲನೆ ಸುಗಮವಾಗಿ ರಕ್ತ ಶುದ್ಧಿಯಾಗುತ್ತದೆ. ಪ್ರಾಣಾಯಾಮದಿಂದ ಶ್ವಾಸಕೋಶದ ಸಾಮರ್ಥ ಹೆಚ್ಚಾಗುತ್ತದೆ. ಮೂಗಿನ ವಾಯು ಸಂಚಾರದ ಮಾರ್ಗ ಬಲಗೊಂಡು ಶ್ವಾಸನಾಳಗಳು ಆರೋಗ್ಯಕರವಾಗುತ್ತದೆ. ಅದರಲ್ಲಿ ಮುಖ್ಯಾವಾಗಿ ಉಸಿರಾಟದ ವ್ಯಾಯಾಮ, ಮೊಲ ಉಸಿರಾಟ (ಶಶಾಂಕಾಸನ) ಅಲರ್ಜಿ ಶೀತವನ್ನು ನಿಯಂತ್ರಿಸುತ್ತದೆ. ಇಲ್ಲಿ ಹೆಚ್ಚಿನ ಆಮ್ಲಜನಕವನ್ನು ಶ್ವಾಸಕೋಶ ಹೀರಿಕೊಳ್ಳುತ್ತದೆ. ಹೆಚ್ಚಿನ ಆಮ್ಲಜನಕ ಶ್ವಾಸಕೋಶಕ್ಕೆ ಹೋದಾಗ ಪ್ರತಿರಕ್ಷಣಾ ವ್ಯವಸ್ಥೆ ಮತ್ತು ಶಕ್ತಿ ಯಿಂದ ಧೀರ್ಘಕಾಲದ ಉಂಟಾದ ಶೀತಗಳು, ಅಸ್ತಮಾ, ಸೈನಸ್ ಅಲರ್ಜಿ  ಇತ್ಯಾದಿ ನಿಯಂತ್ರಣವಾಗುತ್ತದೆ. ಆದ್ದರಿಂದ ಅಗತ್ಯದ ವ್ಯಾಯಾಮಗಳು, ಕ್ರಿಯೆಗಳು, ಆಸನಗಳು, ಪ್ರಾಣಾಯಾಮ, ಮುದ್ರೆಗಳಿಂದ ಶೀತ ಅಲರ್ಜಿಯನ್ನು ನಿಯಂತ್ರಿಸಬಹುದು. 


‘ಮುದ್ರೆ’ ಎಂದರೆ ಕೈಬೆರಳುಗಳನ್ನು ವ್ಯವಸ್ಥಿತ ರೀತಿಯಲ್ಲಿ ಜೋಡಿಸಿ ಒಂದಿಷ್ಟು ಹೊತ್ತು ಇರಿಸಿಕೊಳ್ಳುವ ಭಂಗಿಯೇ ಆಗಿದೆ. ‘ಮುದ್ರೆ’ ಪದಕ್ಕೆ ಸಂಸ್ಕೃತದಲ್ಲಿ ಭಾವ, ಸಂಜ್ಞೆ ಎಂದರ್ಥವಿದೆ. ಮನಸ್ಸಿನ ಭಾವನೆಗಳನ್ನು ಹತೋಟಿಯಲ್ಲಿರಿಸಿ ಪ್ರಶಾಂತ ಸ್ಥಿತಿ ಕಾಪಾಡಿಕೊಂಡು ಏಕಾಗ್ರತೆ ಸಾಧಿಸಲು, ಆಧ್ಯಾತ್ಮಿಕ ಉನ್ನತಿಗೆ ಮುದ್ರೆಗಳು ಪ್ರಯೋಜನಕಾರಿ. ಹಾಗಾಗಿಯೇ ದೈವಿಕ ಮಂತ್ರ-ತಂತ್ರಗಳಿಗೂ ಮುದ್ರೆಗಳಿಗೂ ಅವಿನಾಭಾವ ಸಂಬಂಧ.


ಇನ್ನು, ನಮ್ಮ ದೇವಾನುದೇವತೆಗಳೆಲ್ಲ ಬೇರೆ ಬೇರೆ ಯೋಗ ಮುದ್ರೆಗಳಲ್ಲಿ ಕುಳಿತ, ನಿಂತ ಭಂಗಿ ನಮಗೆಲ್ಲ ಅತ್ಯಂತ ಸಹಜ ಹಾಗೂ ಆಪ್ತ. ಅಭಯಮುದ್ರೆ, ಅಂಜಲಿ ಮುದ್ರೆ, ಜ್ಞಾನಮುದ್ರೆ, ಧ್ಯಾನ ಮುದ್ರೆ, ಇವೆಲ್ಲ ದೇವತೆಗಳ ಮುದ್ರಾವ್ಯಾಪ್ತಿ.


ಕೃಷ್ಣಾಯ ಯಾದವೇಂದ್ರಾಯ ‘ಜ್ಞಾನಮುದ್ರಾಯ’ ಯೋಗಿನೇ

ನಾಥಾಯ ರುಕ್ಮಿಣೀಷಾಯ ನಮೋ ವೇದಾಂತ ವೇದಿನೇ ||

ಎಂದಿದೆ ಉಪನಿಷತ್ತಿನೊಂದು ಶ್ಲೋಕ. ಮಹಾನ್ ಯೋಗಿ ಶ್ರೀಕೃಷ್ಣ ಪರಮಾತ್ಮನ ಜ್ಞಾನಮುದ್ರೆಯ ಭಂಗಿಯನ್ನಿದು ಸಾರುತ್ತದೆ. ಹೀಗಾಗಿ ‘ಮುದ್ರೆ’ ಎನ್ನುವುದು ದೈವಗಳಿಂದಲೇ ಸ್ವೀಕೃತವೆಂದಾದರೆ  ನಮ್ಮಂಥ  ಹುಲುಮಾನವರು ಸ್ವೀಕರಿಸಲೇಬೇಕು ತಾನೆ? 


‘ಮುದ್’ ಎಂದರೆ ಸಂತೋಷ, ಆನಂದ, ಹರ್ಷ. ಇನ್ನು ‘ದ್ರವಯ್’ ಎಂದರೆ ‘ಹೊರಕ್ಕೆಳೆಯುವುದು’ ಎಂದರ್ಥ. ಹೀಗೆ, ಮನದ ಚಿಪ್ಪಿನಲ್ಲಿ ಸುಪ್ತವಾಗಿ ಅಡಗಿರುವ ಸಂತಸದ ಮುತ್ತುಗಳನ್ನು ಅರಳಿಸುವ ಕ್ರಿಯೆಯನ್ನು ಮುದ್ರೆಗಳು ಮಾಡುತ್ತವೆ.


ಅಲರ್ಜಿ ಶೀತಕ್ಕೆ ಅಭ್ಯಾಸ ಮಾಡಬೇಕಾದ ಯೋಗ, ಪ್ರಾಣಾಯಾಮ, ಮುದ್ರೆಗಳ ಸಂಕ್ಷಿಪ್ತ ಪಟ್ಟಿ

ಆಸನಗಳು: ಅರ್ಧ ಚಕ್ರಾಸನ, ಪಾದ ಹಸ್ತಾಸನ, ವೀರಭದ್ರಾಸನ, ತ್ರಿಕೋಣಾಸನ, ಪ್ರಸಾರಿತ, ಪಾದೋತ್ತಾನಾಸನ, ಪದ್ಮಾಸನದಲ್ಲಿ ಪರ್ವತಾಸನ, ಪಶ್ಚಿಮೋತ್ತಾನಾಸನ, ಶಶಂಕಾಸನ, ಸರ್ವಾಂಗಾಸನ ಹಲಾಸನ, ಸರ್ಪಾಸನ, ಅದೋಮುಖ ಶ್ವಾನಾಸನ, ಶವಾಸನ ಇತ್ಯಾದಿ. 


ಪ್ರಾಣಾಯಾಮಗಳು: ನಾಡಿಶುದ್ಧಿ ಪ್ರಾಣಾಯಾಮ, ಉಜ್ಜಯೀ ಪ್ರಾಣಾಯಾಮ, ಸೂರ್ಯನು ಲೋಮ ಸುಖ ಪ್ರಾಣಾಯಾಮ ಇತ್ಯಾದಿ. 


ಕ್ರಿಯೆಗಳು: ಶುದ್ಧೀಕರಣಕ್ಕಾಗಿ, ಕಪಾಲಭಾತಿ, ಜಲನೇತಿ, ಸೂತ್ರನೇತಿಯಿಂದ ಶೀತ ಅಲರ್ಜಿಯನ್ನು ಹತೋಟಿಯಲ್ಲಿಡಬಹುದು. 


ಮುದ್ರೆಗಳು: ಪ್ರಾಣಾಮುದ್ರೆ, ಜ್ಞಾನ ಮುದ್ರೆ, ಅದಿತಿ ಮುದ್ರೆ, ಭ್ರಮರ ಮುದ್ರೆ. ಸಹಜ ಶಂಖ ಮುದ್ರೆ


ಶೀತ ಅಲರ್ಜಿಯಿಂದ ಬಳಲುತ್ತಿರುವವರು ವೈದ್ಯರ ತಪಾಸಣೆ, ಉಪಚಾರದೊಂದಿಗೆ, ಯೋಗ ಮುದ್ರೆಗಳು, ಪ್ರಾಣಾಯಾಮ, ಸೂರ್ಯ ನಮಸ್ಕಾರ, ಆಸನಗಳನ್ನು ನಿತ್ಯ ಅಭ್ಯಾಸ ಮಾಡಿದರೆ ಸಾಕಷ್ಟು ನಿಯಂತ್ರಿಸಬಹುದು ಹಾಗೂ ಪದೇ ಪದೇ ಔಷಧಿಯನ್ನು ಸೇವಿಸುವುದನ್ನು ನಿಲ್ಲಿಸಬಹುದು.  


ಯೋಗವನ್ನು ಶಿಸ್ತುಬದ್ಧವಾಗಿ, ಕ್ರಮವತ್ತಾಗಿ ಉಸಿರಿನ ಗತಿಯೊಂದಿಗೆ ಗುರುಮುಖೇನನೇ ಕಲಿತು ಅಭ್ಯಾಸ ಮಾಡಬೇಕು. ಮಾನಸಿಕ ಶಾಂತಿ, ದೈಹಿಕ ಆರೋಗ್ಯ ಕಾಪಾಡುವ ಯೋಗಕ್ಕೆ ಭಾರತೀಯ ಸಂಪ್ರದಾಯದಲ್ಲಿ ವಿಶಿಷ್ಠ ಸ್ಥಾನವಿದೆ.

 

ಯೋಗಾಸನ ಮಾಡಲಿಕ್ಕೆ ಜಾತಿ, ಮತ, ಲಿಂಗ ಭೇದ ಎಂಬುದಿಲ್ಲ. ಯೋಗದಿಂದ ಮನಸ್ಸು, ಶಾಂತಿ, ನೆಮ್ಮದಿ ಉಂಟಾಗುತ್ತದೆ. ವಿಶ್ವಭ್ರಾತೃತ್ವ ಉಂಟಾಗುತ್ತದೆ. ಇಲ್ಲಿ ಸ್ಪರ್ಧೆ, ದ್ವೇಷ, ಅಸೂಯೆಗಳಿರುವುದಿಲ್ಲ.


-‘ಯೋಗರತ್ನ’ ಶ್ರೀ ಗೋಪಾಲಕೃಷ್ಣ ದೇಲಂಪಾಡಿ

ನಿವೃತ್ತ ಸೀನಿಯರ್ ಹೆಲ್ತ್ ಇನ್ಸ್‌ಪೆಕ್ಟರ್

ಅಂತರರಾಷ್ಟ್ರೀಯ ಯೋಗ ತೀರ್ಪುಗಾರರು

“ಪಾರಿಜಾತ”, ಮನೆ ಸಂಖ್ಯೆ 2-72:5

ಬಿಷಪ್ ಕಂಪೌಂಡು, ಯೆಯ್ಯಾಡಿ ಪದವು

ಕೊಂಚಾಡಿ ಪೋಸ್ಟ್, ಮಂಗಳೂರು -575 008

ಫೋನ್ ನಂ: 9448394987


(ಉಪಯುಕ್ತ ನ್ಯೂಸ್)



ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ


Post a Comment

0 Comments
Post a Comment (0)
Maruti Suzuki Festival of Colours
Maruti Suzuki Festival of Colours
To Top