ಸಂಪ್ರದಾಯ ಬಲ್ಲವನಿಗೆ ಬೊಟ್ಟಿಕೆರೆ ಪುರುಷೋತ್ತಮ ಪೂಂಜಾ ಅತ್ಯುತ್ತಮ ಭಾಗವತ: ಪ್ರಭಾಕರ ಜೋಷಿ

Upayuktha
0

ಯಕ್ಷಧ್ರುವ ಪಟ್ಲ ಫೌಂಡೇಶನ್ ಟ್ರಸ್ಟ್‌ನಿಂದ ನುಡಿನಮನ | ಪೂಂಜಾ ಸರ್ವಾಂಗ ಸಂಪನ್ನ ಕಲಾವಿದ




ಮಂಗಳೂರು: ಖ್ಯಾತ ಯಕ್ಷಗಾನ ಭಾಗವತ, ಪ್ರಸಂಗಕರ್ತ, ಬೊಟ್ಟಿಕೆರೆ ಪುರುಷೋತ್ತಮ ಪೂಂಜ ಅವರಿಗೆ ನುಡಿ ನಮನ ಕಾರ್ಯಕ್ರಮ ಯಕ್ಷಧ್ರುವ ಪಟ್ಲ ಫೌಂಡೇಶನ್ ಟ್ರಸ್ಟ್ ವತಿಯಿಂದ ಕಂಕನಾಡಿ ಗರೋಡಿ ಬಳಿಯ ಅಟ್ಟಣೆ ಹೊಟೇಲ್ ಸಭಾಂಗಣದಲ್ಲಿ ನೆರವೇರಿತು.


ಖ್ಯಾತ ವಿದ್ವಾಂಸ, ಅರ್ಥಧಾರಿ ಡಾ.ಎಂ. ಪ್ರಭಾಕರ ಜೋಷಿ ಮಾತನಾಡಿ 'ಯಕ್ಷಗಾನದ ಸವ್ಯಸಾಚಿ ಬೊಟ್ಟಿಕೆರೆ ಪುರುಷೋತ್ತಮ ಪೂಂಜ ಎಲ್ಲಾ ವಿಭಾಗದಲ್ಲೂ ಸರ್ವಾಂಗ ಸಂಪನ್ನ ಕಲಾವಿದರಾಗಿದ್ದರು. ಎಲ್ಲಾ ಪ್ರಕಾರಗಳಲ್ಲೂ ಪರಿಣತಿ ಹೊಂದಿದವರು. ಪ್ರಸಂಗ ಕರ್ತನಾಗಿ,  ಭಾಗವತನಾಗಿ, ವೇಷಧಾರಿಯಾಗಿ ಯಕ್ಷಗಾನದ ಬೆಳವಣಿಗೆಗೆ ಮಹತ್ತರ ಪಾತ್ರ ಒದಗಿಸಿದವರು. ಸಂಪ್ರದಾಯ ಬಲ್ಲವನಿಗೆ ಅವರು ಅತ್ಯತ್ತಮ ಭಾಗವತ' ಎಂದವರು ತಿಳಿಸಿದರು. 'ಕಲೆಯನ್ನು ವ್ಯವಸಾಯವಾಗಿ ವ್ಯಕ್ತಿತ್ವದಲ್ಲಿ ಅಳವಡಿಸಿಕೊಂಡು ಮೆರೆದವರು. ಅವರು 30ಕ್ಕೂ ಮಿಕ್ಕಿ ಪ್ರಸಂಗವನ್ನು ರಚಿಸಿದ್ದಾರೆ. ಮಾನಿಷಾದ ಇತಿಹಾಸ ನಿರ್ಮಿಸಿದೆ' ಎಂದರು.  


'ಪೂಂಜರು ಯಕ್ಷಗಾನಕ್ಕೆ ಹೊಸ ಬೆಳಕನ್ನು ನೀಡಿದ ಭಾಗವತರು. ಹೊಸ ಕತೆಗೆ ಆಶಯವನ್ನು ಕೊಟ್ಟವರು. ಆದರೆ ಅವರೊಬ್ಬ ದೆಸೆ ಇಲ್ಲದ ದಶಾವತಾರಿ. ಸ್ವಾಭಿಮಾನಿ ಸೌಮ್ಯ ಸ್ವಭಾವದಿಂದಲೇ ಅವರಿಗೆ ಯೋಗ್ಯತೆಯಿದ್ದರೂ ಯೋಗ ಒದಗಿ ಬಾರದಿರುವುದು ವಿಪರ್ಯಾಸ ಅವರ ಸಾವನ್ನು ಅರಗಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ. ಅವರ ಬಗ್ಗೆ ಪರಿಚಯ ಮಾಡುವ, ಅವರ ಸಾಧನೆಯನ್ನು ವಿಸ್ತರಿಸುವ  ಕೆಲಸ ಆಗಬೇಕಾಗಿದೆ. ಈ ನಿಟ್ಟಿನಲ್ಲಿ ಯಕ್ಷಧ್ರುವ ಪಟ್ಲ ಫೌಂಢೇಶನ್ ಸಂಸ್ಥೆ ಅವರ ಪದ್ಯ ರಚನೆಯ ಎರಡು ಪುಸ್ತಕಗಳನ್ನು ಹೊರ ತಂದಿರುವುದು ಪೂಂಜರ ನೆನಪನ್ನು ಶಾಶ್ವತವಾಗಿ ಉಳಿಯುವಂತೆ ಮಾಡಿದೆ. ಅವರು ಮರು ಹುಟ್ಟು ಪಡೆಯಲಿ' ಎಂದು ಡಾ.ಪ್ರಭಾಕರ ಜೋಷಿ ನುಡಿನಮನ ಸಲ್ಲಿಸಿದರು.


'ಬೊಟ್ಟಿಕೆರೆ ಪುರುಷೋತ್ತಮ ಪೂಂಜರು ಅನಾರೋಗ್ಯಕ್ಕೆ ತುತ್ತಾದಾಗ ಅವರನ್ನು ಸಮಾಜ ಬದುಕಿಸಲು ಪ್ರಯತ್ನಿಸಿತು. ಅನಾರೋಗ್ಯದ ಮಧ್ಯೆಯೂ ಅವರು ಬರೆಯುವುದನ್ನು ನಿಲ್ಲಿಸಿರಲಿಲ್ಲ. ತುಳು-ಕನ್ನಡ ಭಾಷೆಗೊಂದು ಸೌಂದರ್ಯ ಮೆರಗು ನೀಡಿದವರು. ಮನೆಯನ್ನೇ ಗುರುಕುಲವನ್ನಾಗಿಸಿದ್ದರು. ಅವರ ನಿಧನ ಸಮಾಜ ಮತ್ತು ಯಕ್ಷಗಾನ ಕ್ಷೇತ್ರಕ್ಕೆ ತುಂಬಲಾರದ ನಷ್ಟ' ಎಂದು ಕರ್ನಾಟಕ ಜಾನಪದ ಮತ್ತು ಯಕ್ಷಗಾನ ಅಕಾಡೆಮಿಯ ಮಾಜಿ ಸದಸ್ಯ ಪ್ರೊ. ಭಾಸ್ಕರ ರೈ ಕುಕ್ಕುವಳ್ಳಿ ತಿಳಿಸಿದರು. 


ಪಟ್ಲ ಫೌಂಢೇಶನ್ ಟ್ರಸ್ಟ್‌ನ ಸ್ಥಾಪಕಾಧ್ಯಕ್ಷ ಪಟ್ಲ ಸತೀಶ್ ಶೆಟ್ಟಿ ಮಾತನಾಡಿ ' ಪುರುಷೋತ್ತಮ ಪೂಂಜಾರವರು ನನಗೆ ಗುರು ಸ್ಥಾನದಲ್ಲಿದ್ದವರು. ಪೂಂಜಾರಿಗೆ ಸರಿ ಸಾಟಿಯಾದ ಭಾಗವತರಿಲ್ಲ. ಒಂದು ಅದ್ಭುತ ಸಂಪತ್ತನ್ನು ನಾವು ಕಳೆದುಕೊಂಡಿದ್ದೇವೆ. ಅವರ ಯೋಗ್ಯತೆಗೆ, ವಿದ್ಯೆಗೆ ತಕ್ಕಂತೆ ಅಂತಹ ವಿದ್ವಾಂಸರನ್ನು ಗುರುತಿಸುವ ಕೆಲಸ ಆಗಲಿಲ್ಲ. ಆದರೆ ಪಟ್ಲ ಫೌಂಢೇಶನ್ ಟ್ರಸ್ಟ್ ಅವರ ಕೃತಿಗಳನ್ನು ಪ್ರಕಟಿಸಿದ್ದು, ನಮ್ಮಲ್ಲಿ ಧನ್ಯತಾ ಭಾವನೆ ಮೂಡಿದೆ ಎಂದರು. ಯಕ್ಷಗಾನ ಕ್ಷೇತ್ರ ಮತ್ತು ಸಮಾಜಕ್ಕೆ ನೀಡಿದ ಕೊಡುಗೆ ಅಪಾರ. ನಮ್ಮ ಸಂಸ್ಕೃತಿ, ಜನಪದೀಯ, ಆಚಾರ-ವಿಚಾರಗಳ ಕುರಿತು ಅವರು ಬಹಳಷ್ಟು ಅಧ್ಯಯನ  ಮಾಡಿದ್ದರು' ಎಂದು ಪಟ್ಲ ಸತೀಶ್ ಶೆಟ್ಟಿ ತಿಳಿಸಿದರು.  


ಪಟ್ಲ ಫೌಂಢೇಶನ್ ಟ್ರಸ್ಟ್‌ನ ಪ್ರಧಾನ ಕಾರ್ಯದರ್ಶಿ ಪುರುಷೋತ್ತಮ ಭಂಡಾರಿ ಅಡ್ಯಾರ್ ಪ್ರಸ್ತಾವಿಕವಾಗಿ ಮಾತನಾಡಿದರು. ಕಾರ್ಯಕ್ರಮದಲ್ಲಿ ರವಿಚಂದ್ರ ಶೆಟ್ಟಿ ಅಶೋಕ ನಗರ, ಜಗಧೀಶ ಶೆಟ್ಟಿ ಕಾರ್ ಸ್ಟ್ರೀಟ್,  ಪ್ರದೀಪ್ ಆಳ್ವ ಕದ್ರಿ, ಕೃಷ್ಣ ಶೆಟ್ಟಿ ತಾರೇಮಾರ್, ಸುಬ್ರಹ್ಮಣ್ಯ ಭಟ್, ಗೋಪಿನಾಥ ಶೆಟ್ಟಿ,  ಅಶ್ವಿತ್ ಶೆಟ್ಟಿ, ಜಗನ್ನಾಥ ಶೆಟ್ಟಿ ಬಾಳ ಮೊದಲಾದವರು ಉಪಸ್ಥಿತರಿದ್ದರು.


(ಉಪಯುಕ್ತ ನ್ಯೂಸ್)



ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ


Post a Comment

0 Comments
Post a Comment (0)
Maruti Suzuki Festival of Colours
Maruti Suzuki Festival of Colours
To Top