ಅಂಬಿಕಾದಲ್ಲಿ ಸಿಎ, ಸಿಎಸ್, ಬ್ಯಾಂಕಿಂಗ್ ಪರೀಕ್ಷೆಗಳ ಬಗೆಗೆ ಮಾಹಿತಿ ಕಾರ್ಯಾಗಾರ

Upayuktha
0

ಇಂಟಗ್ರೇಟೆಡ್ ಬಿಕಾಂ ಈಗೀಗ ಹೆಚ್ಚು ಪ್ರಚಲಿತಕ್ಕೆ ಬರುತ್ತಿದೆ: ಪ್ರಸನ್ನ ಭಟ್ಟ



ಪುತ್ತೂರು: ಇತ್ತೀಚೆಗಿನ ವರ್ಷಗಳಲ್ಲಿ ಇಂಟಗ್ರೇಟೆಡ್ ಬಿಕಾಂ ಅನ್ನುವ ಅಧ್ಯಯನ ವಿಷಯ ಹೆಚ್ಚು ಪ್ರಚಲಿತಕ್ಕೆ ಬರುತ್ತಿದೆ. ಬಿ.ಕಾಂ ಅನ್ನು ಅಧ್ಯಯನ ಮಾಡುತ್ತಲೇ ಸಿಎ ಪರೀಕ್ಷೆಗಳಿಗೂ ತರಬೇತಿ ಹೊಂದುವುದರಿಂದ ಅನೇಕ ವಿದ್ಯಾರ್ಥಿಗಳ ಸಿಎ ಕನಸು ನನಸಾಗುವುದಕ್ಕೆ ಸಾಧ್ಯವಾಗುತ್ತಿದೆ. ಪುತ್ತೂರಿನಲ್ಲಿ ಇಂಟಗ್ರೇಟೆಡ್ ಬಿ.ಕಾಂ ಅನ್ನು ಆರಂಭಿಸಿದ ಕೀರ್ತಿ ಅಂಬಿಕಾ ಪದವಿ ಮಹಾವಿದ್ಯಾಲಯಕ್ಕೆ ಸೇರಿದೆ ಎಂದು ನಗರದ ನಟ್ಟೋಜ ಫೌಂಡೇಶನ್ ಟ್ರಸ್ಟ್ ಮುನ್ನಡೆಸುತ್ತಿರುವ ಅಂಬಿಕಾ ಸಮೂಹ ಶಿಕ್ಷಣ ಸಂಸ್ಥೆಗಳ ಆಡಳಿತ ಮಂಡಳಿ ಸದಸ್ಯ ಪ್ರಸನ್ನ ಭಟ್ಟ ಹೇಳಿದರು.


ಅವರು ಬಪ್ಪಳಿಗೆಯಲ್ಲಿನ ಅಂಬಿಕಾ ಪದವಿ ಮಹಾವಿದ್ಯಾಲಯದ ತರಬೇತಿ ಮತ್ತು ಉದ್ಯೋಗ ಘಟಕದ ಆಶ್ರಯದಲ್ಲಿ ವಾಣಿಜ್ಯ ವಿಷಯಾಸಕ್ತ ವಿದ್ಯಾರ್ಥಿಗಳಿಗಾಗಿ ಆಯೋಜಿಸಲಾದ ಬಿ.ಕಾಂ, ಸಿ.ಎ, ಸಿ.ಎಸ್ ಹಾಗೂ ಬ್ಯಾಂಕಿಂಗ್ ಪರೀಕ್ಷೆಗಳ ಬಗೆಗಿನ ಮಾಹಿತಿ ಕಾರ್ಯಾಗಾರವನ್ನು ಉದ್ಘಾಟಿಸಿ ಶನಿವಾರ ಮಾತನಾಡಿದರು. Upayuktha  


ಸಿಎಯಂತಹ ಔದ್ಯೋಗಿಕ ಸಾಧ್ಯತೆಗಳು ವಿದ್ಯಾರ್ಥಿಗಳನ್ನು ಸ್ವಾವಲಂಬಿ ಜೀವನದೆಡೆಗೆ ಕರೆದೊಯ್ಯುತ್ತವೆ. ಈಗೀಗ ಅನೇಕ ಹೊಸಹೊಸ ಶಿಕ್ಷಣ ಸಾಧ್ಯತೆಗಳು ಕಣ್ಣಮುಂದೆ ಕಾಣಿಸಿಕೊಳ್ಳುತ್ತಿವೆ. ಆದರೆ ಮಂಗಳೂರಿನಂತಹ ದೊಡ್ಡ ನಗರಗಳಲ್ಲಿ ಚಾಲ್ತಿಯಲ್ಲಿರುವ ಅಧ್ಯಯನ ವಿಷಯಗಳು ಪುತ್ತೂರಿನ ಪರಿಸರಕ್ಕೂ ಆಗಮಿಸುತ್ತಿರುವುದು ಸ್ವಾಗತಾರ್ಹ ವಿಚಾರ. ಗ್ರಾಮೀಣ ಭಾಗದ ವಿದ್ಯಾರ್ಥಿಗಳಿಗೂ ಆಧುನಿಕ ಶಿಕ್ಷಣದ ಕಂಪು ಪಸರಿಸುವುದಕ್ಕೆ ಇದರಿಂದ ಸಾಧ್ಯ ಎಂದು ಅಭಿಪ್ರಾಯಪಟ್ಟರು.


ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದ ಅಂಬಿಕಾ ಸಮೂಹ ಶಿಕ್ಷಣ ಸಂಸ್ಥೆಗಳ ಆಡಳಿತ ಮಂಡಳಿಯ ನಿರ್ದೇಶಕ ಸುರೇಶ್ ಶೆಟ್ಟಿ ಮಾತನಾಡಿ ಸಿಎಯಂತಹ ವಿಷಯಗಳು ಸುಲಭಕ್ಕೆ ಒಲಿಯುವಂತಹವುಗಳಲ್ಲ. ಅಪಾರ ಪರಿಶ್ರಮ ಇದ್ದರೆ ಮಾತ್ರ ಕನಸು ನನಸಾಗಬಹುದು. ಬಿ.ಕಾಂ ಪದವಿಯ ಮೊದಲ ವರ್ಷದಿಂದಲೇ ಸಿಎಗೂ ತಯಾರಿ ನಡೆಸುವುದು ಈ ನೆಲೆಯಲ್ಲಿ ಅತ್ಯುತ್ತಮ ಎಂದರಲ್ಲದೆ ಅಂತಹ ವಿಷಯಗಳ ಬಗೆಗೆ ದೊರಕುವಂತಹ ಮಾಹಿತಿಯನ್ನು ವಿದ್ಯಾರ್ಥಿಗಳು ಗಂಭೀರವಾಗಿ ಪರಿಗಣಿಸಿ ಸಿದ್ಧತೆ ನಡೆಸಬೇಕು ಎಂದು ಕರೆ ನೀಡಿದರು.


ಅಂಬಿಕಾ ಪದವಿ ಕಾಲೇಜಿನ ಪ್ರಾಚಾರ್ಯ ಡಾ.ವಿನಾಯಕ ಭಟ್ಟ ಗಾಳಿಮನೆ ಪ್ರಸ್ತಾವನೆಗೈದು ಅಂಬಿಕಾ ಪದವಿ ಕಾಲೇಜು ಅತ್ಯುತ್ತಮ ಸಿಎಗಳ ನಿರ್ಮಾಣಕ್ಕೆ ಕಟಿಬದ್ಧವಾಗಿದೆ. ಸಿಎ ತೇರ್ಗಡೆಯಾದವರೇ ವಿದ್ಯಾರ್ಥಿಗಳಿಗೆ ತರಬೇತಿ ನೀಡಲಿದ್ದಾರೆ. ಹಾಗೆಯೇ ಬ್ಯಾಂಕಿಂಗ್ ಕ್ಷೇತ್ರದಲ್ಲಿ ಇಂದು ಅಪಾರ ಉದ್ಯೋಗಾವಕಾಶಗಳಿದ್ದು ಆ ನೆಲೆಯಲ್ಲೂ ವಿದ್ಯಾರ್ಥಿಗಳನ್ನು ರೂಪಿಸುವ ಕಾರ್ಯ ನಡೆಯಲಿದೆ ಎಂದು ಹೇಳಿದರು.


ಅಧ್ಯಕ್ಷತೆ ವಹಿಸಿದ್ದ ಅಂಬಿಕಾ ಸಮೂಹ ಶಿಕ್ಷಣ ಸಂಸ್ಥೆಗಳ ಕಾರ್ಯದರ್ಶಿ ಸುಬ್ರಹ್ಮಣ್ಯ ನಟ್ಟೋಜ ಮಾತನಾಡಿ ಯಾವುದೇ ದೇಶ ಅಭಿವೃದ್ಧಿ ಸಾಧಿಸಲು ಆರ್ಥಿಕತೆ ಅನ್ನುವುದು ಬಹಳ ಮುಖ್ಯ. ದೇಶದ ಅರ್ಥಮಂತ್ರಿಯೂ ಸಿಎ ತೇರ್ಗಡೆಯಾದವರ ಸಲಹೆಯ ಆಧಾರದ ಮೇಲೆ ಬಜೆಟ್ ಮಂಡನೆ ಮಾಡುತ್ತಾರೆ ಹಾಗೂ ದೈನಂದಿನ ಕಾರ್ಯಯೋಜನೆಗಳನ್ನು ಹಮ್ಮಿಕೊಳ್ಳುತ್ತಾರೆ. ಹಾಗಾಗಿ ದೇಶಭಕ್ತ ಸಿಎಗಳನ್ನು ನಾವು ತಯಾರು ಮಾಡಿದರೆ ಮುಂದಿನ ದಿನಗಳಲ್ಲಿ ಅದರ ಸತ್ಪರಿಣಾಮ ದೇಶದ ಮೇಲೆ ಕಾಣಿಸಿಕೊಳ್ಳಲಿದೆ ಎಂದು ತಿಳಿಸಿದರು.


ಕಾರ್ಯಕ್ರಮದಲ್ಲಿ ಅಂಬಿಕಾ ಸಮೂಹ ಶಿಕ್ಷಣ ಸಂಸ್ಥೆಗಳ ಕೋಶಾಧಿಕಾರಿ ರಾಜಶ್ರೀ ನಟ್ಟೋಜ, ಸಮೂಹ ಸಂಸ್ಥೆಗಳ ಆಡಳಿತಾಧಿಕಾರಿ ಗಣೇಶ್ ಪ್ರಸಾದ್ ಎ, ಸಾರ್ವಜನಿಕ ಸಂಪರ್ಕಾಧಿಕಾರಿ ರಾಕೇಶ್ ಕುಮಾರ್ ಕಮ್ಮಜೆ ಉಪಸ್ಥಿತರಿದ್ದರು. ಕಾಲೇಜಿನ ಗಣಿತಶಾಸ್ತ್ರ ವಿಭಾಗದ ಮುಖ್ಯಸ್ಥ ಅಕ್ಷಯ್ ಹೆಗಡೆ ಸ್ವಾಗತಿಸಿ, ಭೌತಶಾಸ್ತ್ರ ವಿಭಾಗದ ಮುಖ್ಯಸ್ಥ ಅಭಿಷೇಕ್ ಎನ್ ವಂದಿಸಿದರು. ತರಬೇತಿ ಮತ್ತು ಉದ್ಯೋಗ ಘಟಕದ ಸಂಯೋಜಕಿ ಅನನ್ಯಾ ವಿ ಕಾರ್ಯಕ್ರಮ ನಿರ್ವಹಿಸಿದರು.


ಸಭಾ ಕಾರ್ಯಕ್ರಮದ ನಂತರ ಮಾಹಿತಿ ಕಾರ್ಯಾಗಾರ ನಡೆಯಿತು. ಕಾರ್ಯಕ್ರಮದಲ್ಲಿ ಆನ್‍ಲೈನ್ ಮೂಲಕ ಅನೇಕ ವಿದ್ಯಾರ್ಥಿಗಳು ಭಾಗಿಯಾದರು. ಸಂಪನ್ಮೂಲ ವ್ಯಕ್ತಿಯಾಗಿ ಮಂಗಳೂರಿನ ಸಿಎ ಅನೂಷಾ ಅವರು ವಿಷಯದ ಕುರಿತಾಗಿ ಸಮಗ್ರ ಮಾಹಿತಿ ನೀಡಿ ವಿದ್ಯಾರ್ಥಿಗಳ ಪ್ರಶ್ನೆಗಳಿಗೆ ಉತ್ತರಿಸಿದರು.


(ಉಪಯುಕ್ತ ನ್ಯೂಸ್)



ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ


Post a Comment

0 Comments
Post a Comment (0)
Mandovi Motors Presents MONSOON BONANZA
Mandovi Motors Presents MONSOON BONANZA
To Top