ಕಲ್ಬುರ್ಗಿ: ಯುದ್ಧಕ್ಕಿಳಿದ ವಿಶ್ರಾಂತ ಉಪಕುಲಪತಿಗಳು
ಈ ಯುದ್ಧ, ಬೆಲೆ ಕುಸಿತದ ವಿರುದ್ಧ
"ನಾನು ಒಂದೆಕರೆಯಲ್ಲಿ ಬಾಳೆ ಬೆಳೆಯುವ ಸಣ್ಣ ಕೃಷಿಕ. ಬೆಲೆ ಸಿಗದೆ ತೊಂದರೆ ಅನುಭವಿಸುತ್ತಿದ್ದೇನೆ. ಆಗಸ್ಟ್ ಅಡಿಕೆ ಪತ್ರಿಕೆ ಓದಿ ಆಶ್ಚರ್ಯ ಮತ್ತು ಖುಷಿ ಆಯಿತು. ಬಾಳೆಕಾಯಿ ಹಿಟ್ಟು ಮಾಡುವುದು ಹೇಗೆ ತಿಳಿಸಿ." ಈ ವಾಟ್ಸಪ್ ಸಂದೇಶ ಅಡಿಕೆ ಪತ್ರಿಕೆಗೆ ಬಂದದ್ದು ಐದಾರು ದಿನ ಹಿಂದೆ. ಸೆಪ್ಟೆಂಬರ್ ಸಂಚಿಕೆಯ ’ಡೆಡ್ ಲೈನ್ ಜ್ವರದಿಂದ ಬಳಲುತ್ತಿದ್ದ’ ಕಾರಣ ತಕ್ಷಣ ಉತ್ತರಿಸಲಾಗಲಿಲ್ಲ.
ಶುಕ್ರವಾರ, 13ರಂದು ಗಂಗಾವತಿಯ ಕೇವೀಕೆಯಿಂದ ಬಾಕಾಹು ಬಗ್ಗೆ ವೆಬಿನಾರ್ ಇತ್ತು. ಬೆಳ್ಳಂಬೆಳಗ್ಗೆಯೇ ಬಾಕಾಹು ತಯಾರಿಯ ವಿಡಿಯೋ, ಮಾಹಿತಿ ಕಳಿಸಿಕೊಟ್ಟು ಮೇಲಿನ ಸಂದೇಶ ಕಳಿಸಿದ ಕೃಷಿಕರಿಗೆ ಕರೆ ಮಾಡಿದೆ. ವೆಬಿನಾರ್ ಇದೆ ಎಂದೂ ತಿಳಿಸಿದೆ.
ಮಾತಾಡಿಸಿದಾಗ ಅಚ್ಚರಿ! ಅವರು ಸಾಮಾನ್ಯ ಕೃಷಿಕರಲ್ಲ. ಡಾ. ಪ್ರತಾಪ್ ಸಿಂಗ್ ತಿವಾರಿ. ಗುಲ್ಬರ್ಗ ವಿಶ್ವವಿದ್ಯಾಲಯದಿಂದ ಏಳು ವರ್ಷ ಹಿಂದೆ ನಿವೃತ್ತರಾದ ಉಪಕುಲಪತಿ. ಈಗ ಪೂರ್ಣಾವಧಿ ಕೃಷಿಕರು. ತುಂಬು ಚಟುವಟಿಕೆಯಿಂದಿದ್ದಾರೆ.
ತಿವಾರಿಯವರು ಅಂದೇ ವೆಬಿನಾರಿನಲ್ಲಿ ಭಾಗವಹಿಸಿದರು, ಬಾಕಾಹು ತಯಾರಿಯ ಪ್ರಯೋಗಕ್ಕೆ ದಿನ ಗೊತ್ತು ಮಾಡಿದರು. ಆ ದಿನ ಇಂದು.
ಇಂದು ಮಧ್ಯಾಹ್ನ ತೋಟದ ಸಹಾಯಕ ಯುವಕ ಶರಣ ಬಸವನನ್ನು ಜತೆ ಮಾಡಿ ಪ್ರತಾಪ್ ಸಿಂಗ್ ಕೈಯಲ್ಲಿ ಚಾಕು ಹಿಡಿದು ಯುದ್ಧಕ್ಕಿಳಿದರು. ಈ ಯುದ್ಧ ಬಾಳೆಯ ಬೆಲೆ ಕುಸಿತದ ವಿರುದ್ಧ!
ದೊಡ್ಡದೊಂದು ಬಾಳೆಕಾಯಿಯನ್ನು ಚಿಪ್ಸ್ ಮಾಡಿ ಒಣಗಲು ಹಾಕಿದರು. ನಾಳೆ ಇನ್ನೂ ಮೂರುನಾಲ್ಕು ಬಾಳೆಗೊನೆ ಚಿಪ್ಸ್ ಮಾಡೋಣವೇ ಎಂದು ಕೇಳಿದರು. "ಬಹಳ ಈಸಿ ಇದೆ ಸರ್, ಮಾಡಿಯೇಬಿಡೋಣ" ಎಂದಿದ್ದಾರಂತೆ ಶರಣ ಬಸವ.
ಪ್ರತಾಪ್ ಸಿಂಗ್ 15 ವರ್ಷಗಳಿಂದ ಕೃಷಿ ಮಾಡುತ್ತಿದ್ದಾರೆ. ಇವರ 'ನಮ್ಮ ಭೂಮಿ ಬಾಳೆ ಬೆಳೆಗಾರರು’ ವೇದಿಕೆಯಲ್ಲಿ ಜಿಲ್ಲೆಯ 55 ಮಂದಿ ಕೃಷಿಕರಿದ್ದಾರೆ. ಎರಡೆಕ್ರೆಯಿಂದ 10 ಎಕ್ರೆಯ ವರೆಗೆ ಬಾಳೆ ತೋಟ ಇರುವವರು ಈ ವೇದಿಕೆಯಲ್ಲಿದ್ದಾರೆ. ಬಾಕಾಹು ಹುಡಿ ತಯಾರಾಗಿ ಅದರ ಅಡುಗೆಯೂ ಆದ ನಂತರ ಸಹ ಬಾಳೆ ಬೆಳೆಗಾರರಿಗೆ ಇವರು ಈ ವಿದ್ಯೆ ಹಂಚಲು ಉತ್ಸುಕರಾಗಿದ್ದಾರೆ. "ಯಶಸ್ವಿಯಾಗುವ ಆತ್ಮವಿಶ್ವಾಸ ಬಂದಿದೆ" ಎನ್ನುತ್ತಾರೆ. ಬಾಳೆ ಬೆಳೆಗಾರರ ಹತಾಶೆ ಕುಗ್ಗಿಸುವ ಹೊಸ ವಿದ್ಯೆ ಕೈಗೆ ಬಂದ ಪುಳಕದಲ್ಲಿದ್ದಾರೆ ಈ 67ರ ಯುವಕ ಈಗ.
ಡಾ. ಪ್ರತಾಪ್ ಸಿಂಗ್ ತಿವಾರಿ - 94481 22195 (ಸಂಜೆ 6- 7)
- ಶ್ರೀಪಡ್ರೆ, ಅಡಿಕೆ ಪತ್ರಿಕೆ ಸಂಪಾದಕರು
(ಉಪಯುಕ್ತ ನ್ಯೂಸ್)
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ