ಪರಮೇಶ್ವರ ಭಟ್ಟ ಬಾಳಿಲ ಪ್ರಶಸ್ತಿಗೆ ನಾರಾಯಣ ಕೃಷ್ಣ ಶಾನಭಾಗ ಆಯ್ಕೆ

Upayuktha
0

ಮಂಗಳೂರು: ಹವ್ಯಕ ಭಾಷಾ ಸಾಹಿತ್ಯದ ಬೆಳವಣಿಗೆಗೆ ಶ್ರಮಿಸುತ್ತಿರುವ ಒಪ್ಪಣ್ಣ ನೆರೆಕರೆ ಪ್ರತಿಷ್ಠಾನವು (ರಿ) ವಾರ್ಷಿಕವಾಗಿ ನೀಡುವ ಪರಮೇಶ್ವರ ಭಟ್ಟ ಬಾಳಿಲ ಪ್ರಶಸ್ತಿಗೆ ಈ ಬಾರಿ (2021–22) ಉತ್ತರ ಕನ್ನಡದ ಕುಮಟಾದ ಸಾಹಿತಿ ನಾರಾಯಣ ಕೃಷ್ಣ ಶಾನಭಾಗ ಅವರು ಆಯ್ಕೆಯಾಗಿದ್ದಾರೆ.


ಹವ್ಯಕ ಭಾಷೆಯಲ್ಲಿ ಸಾಹಿತ್ಯ ಕೃಷಿ ಮಾಡಿರುವವರನ್ನು ಗುರುತಿಸಿ, ಸಾಹಿತಿ ಪರಮೇಶ್ವರ ಭಟ್ಟ ಬಾಳಿಲ ಅವರ ಹೆಸರಿನಲ್ಲಿ ಪ್ರತಿ ವರ್ಷ ಈ ಪ್ರಶಸ್ತಿ ನೀಡಲಾಗುತ್ತಿದೆ. 

ಪ್ರಶಸ್ತಿಯು ₹5000 ನಗದು, ಫಲಕ, ಸ್ಮರಣಿಕೆಯನ್ನು ಒಳಗೊಂಡಿದೆ. ಪ್ರಶಸ್ತಿ ಪ್ರದಾನ ಸಮಾರಂಭವನ್ನು ಶೀಘ್ರದಲ್ಲಿ ಪ್ರಕಟಿಸಲಾಗುವುದು.


ಪ್ರಶಸ್ತಿ ಪುರಸ್ಕೃತರ ಪರಿಚಯ:

ಕುಮಟಾ ತಾಲ್ಲೂಕಿನ ವಾಲಗಳ್ಳಿಯಲ್ಲಿ 1943ರ ಜುಲೈ 28ರಂದು ಜನಿಸಿದ ನಾರಾಯಣ ಕೃಷ್ಣ ಶಾನಭಾಗರು ಕೃಷ್ಣ ಶಾನುಭೋಗ ಹಾಗೂ ಮಹಾದೇವಿ ದಂಪತಿಯ ಮೊದಲ ಮಗ.


ಕೃಷಿಕ ಕುಟುಂಬದಿಂದ ಬಂದವರಾದ ಶಾನಭಾಗರು ಪ್ರಾಥಮಿಕ ಶಿಕ್ಷಣವನ್ನು ವಾಲಗಳ್ಳಿ ಹಾಗೂ ಪ್ರೌಢಶಾಲಾ ಶಿಕ್ಷಣವನ್ನು ಕೂಜಳ್ಳಿಯಲ್ಲಿ ಪಡೆದರು. ಕಾರವಾರದ ಸರಕಾರಿ ಪಾಲಿಟೆಕ್ನಿಕ್ ಕಾಲೇಜಿನಲ್ಲಿ ಸಿವಿಲ್ ಇಂಜಿನಿಯರಿಂಗ್ನಲ್ಲಿ ಡಿಪ್ಲೊಮಾ, ಅದೇ ಕಾಲೇಜು, ಬೆಳಗಾವಿ ಪಾಲಿಟೆಕ್ನಿಕ್ನಲ್ಲಿ ಉಪನ್ಯಾಸಕರಾಗಿ ಸೇವೆ ಸಲ್ಲಿಸಿದ್ದಾರೆ. ಎಎಂಐಐ ಇಂಜಿನಿಯರಿಂಗ್ ಪದವಿ 1973ರಲ್ಲಿ ಕರ್ನಾಟಕ ವಿದ್ಯುತ್ ನಿಗಮದಲ್ಲಿ ಇಂಜಿನಿಯರ್ ಆಗಿ ಸೇವೆ ಆರಂಭಿಸಿ ಕಾರ್ಯಪಾಲಕ ಇಂಜಿನಿಯರ್ ಆಗಿ ಮುಂದೆ 2001ರಲ್ಲಿ ನಿವೃತ್ತಿಯಾದರು.


ಹವ್ಯಕ ಮಹಾಸಭೆಯ ಹವ್ಯಕ ಅಧ್ಯಯನ ಕೇಂದ್ರದ ಸ್ಥಾಪಕ ಪ್ರಧಾನ ನಿರ್ದೇಶಕರಾಗಿ 10 ವರ್ಷಗಳ ಕಾಲ ಸೇವೆ ಸಲ್ಲಿಸಿರುವ ನಾರಾಯಣ ಕೃಷ್ಣ ಶಾನಭಾಗರು, 22 ಪುಸ್ತಕಗಳು ಪ್ರಕಟಣೆಗೊಳ್ಳುವಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ.


‘ಅಕಳಂಕ ಚೇತನ-ಕೆಕ್ಕಾರು ನರಸಿಂಹ ಭಟ್ಟರು’, ‘ಕೀರ್ತಿಶೇಷ ಹವ್ಯಕ ಗ್ರಂಥಕಾರ ಕೃತಿಸೂಚಿ’, ‘ಶಿವಸದ್ಗುರು ಕೃತಿ ಸಂಚಯ’, ‘ಹವಿಗನ್ನಡ ಚಿಂತನ’, ‘ಹವ್ಯಕ ಗ್ರಂಥಕಾರ ಕೃತಿದರ್ಪಣ’, ‘ಹವ್ಯಕ ಮಹಿಳಾ ಸಾಹಿತ್ಯ ದರ್ಶಿನಿ’, ಹವ್ಯಕರ ಸಂಕ್ಷಿಪ್ತ ಇತಿಹಾಸ, 9 ಹವಿಗನ್ನಡ ಯಕ್ಷಗಾನ ಪ್ರಸಂಗಗಳನ್ನು ಒಳಗೊಂಡ ‘ಹವಿಗನ್ನಡದ ನವಪ್ರಸಂಗಗಳು’ ಎಂಬ ಸಂಪಾದಿತ ಕೃತಿ, ‘ಗಣೇಶ ಜನನ ಮಕ್ಕಳ ನಾಟಕ’, ‘ಹವ್ಯಕ ರಚಿತ ಕಥೆ’, ‘ನಾಟಕ ಮತ್ತು ಮಕ್ಕಳ ಸಾಹಿತ್ಯ ಕೈಪಿಡಿ’, ’ಹವ್ಯಕ ಯಕ್ಷಗಾನ ಕವಿಕಾವ್ಯ ಸೂಚಿ’.. ಇವರ ಪ್ರಮುಖ ಕೃತಿಗಳು.


‘ಹವಿಗನ್ನಡ ಚಿಂತನ’ ಎಂಬ ಸ್ವರಚಿತ ಕೃತಿಗಳನ್ನು ಕೃಷ್ಣಜ ಎಂಬ ಕಾವ್ಯನಾಮದಿಂದ ಪ್ರಕಟಿಸಿದ್ದಾರೆ.


‘ಉತ್ತರ ಕನ್ನಡ ಜಿಲ್ಲಾ ಗ್ರಂಥಕಾರ ಕೃತಿಕೋಶ’ ಎಂಬ ಸಂಶೋಧನ ಕೃತಿಯನ್ನೂ ಪ್ರಕಟಿಸಿದ್ದಾರೆ. 2006ರಲ್ಲಿ ಹೊನ್ನಾವರದಲ್ಲಿ ಹವಿಗನ್ನಡ ಸಾಹಿತ್ಯ ಸಮ್ಮೇಳನವನ್ನು ನಡೆಸಿದ ಕೀರ್ತಿಯೂ ನಾರಾಯಣ ಕೃಷ್ಣ ಶಾನಭಾಗರಿಗೆ ಇದೆ. ಹವ್ಯಕ ಭಾಷಾ ಅಧ್ಯಯನದಲ್ಲಿ ತೊಡಗಿರುವ ಸಾಧಕರನ್ನು ಗುರುತಿಸಿ ಕೊಡಮಾಡುವ ಹವ್ಯಕಸೂರಿ ಪ್ರಶಸ್ತಿಯನ್ನು ಸ್ಥಾಪಿಸಿ ಹಲವಾರು ಮಂದಿಯನ್ನು ಗೌರವಿಸಿದ್ದಾರೆ.


(ಉಪಯುಕ್ತ ನ್ಯೂಸ್)



ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ


Post a Comment

0 Comments
Post a Comment (0)
Maruti Suzuki Festival of Colours
Maruti Suzuki Festival of Colours
To Top