ತನ್ನ ಪರಮಾಪ್ತ ಜಾತಿ ಕುಲದ ಶಿಷ್ಯನನ್ನೆ ಮುಖ್ಯಮಂತ್ರಿ ಪೀಠದಲ್ಲಿ ಕೂರಿಸಿ ತನಗೆ ಬೇಕಾದ ರೀತಿಯಲ್ಲಿ ಸರಕಾರದ ಭವಿಷ್ಯ ರೂಪಿಸಲು ಸಕಲ ತಯಾರಿ ಮಾಡಿಕೊಂಡಿದ್ದ ಯಡಿಯೂರಪ್ಪಾಜಿಯವರು ಕೊನೆಗೂ ತಮ್ಮ ಹೃದಯದ ಒಡಲಾಸೆಯನ್ನು ನಿಧಾನವಾಗಿ ಹೊರಗಿಡಲು ಹೊರಟಿದ್ದಾರೆ. ನಾವೆಲ್ಲರೂ ಬಹು ನಿರೀಕ್ಷೆ ಮಾಡಿದ ತರದಲ್ಲಿಯೇ ಪುತ್ರ ವಾತ್ಸಲ್ಯಕ್ಕೆ ನಿಜ ರೂಪ ಈಗಲೇ ಕೊಡಬೇಕು. ಮತ್ತೆ ಮುಂದೇನು ಆಗುತ್ತೊ ದೇವರೇ ಬಲ್ಲ.
ಹಾಗಾಗಿ ಈಗಿನ ಪರಿಸ್ಥಿತಿ ತುಂಬಾ ಚೆನ್ನಾಗಿದೆ ಆದಿಯಿಂದ ಹಿಡಿದು ಮೇೂದಿಯ ತನಕ ಯಡಿಯೂರಪ್ಪನವರನ್ನು ಕರುನಾಡಿನ ಕಣ್ಮಣಿ ಅನ್ನುವ ತರದಲ್ಲಿ ಹಾಡಿ ಹೊಗಳಿದ್ದೆ ಯಡಿಯೂರಪ್ಪನವರಿಗೆ ಮುಂದಿನ ರಾಜಕೀಯ ಆಟಕ್ಕೆ ರಂಗಭೂಮಿ ಸಜ್ಜು ಮಾಡಿ ಕೊಟ್ಟ ಹಾಗೆ ಆಗಿದೆ ಅನ್ನುವುದು ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪನವರ ಒಳ ಧ್ವನಿಯ ಮಾತಿನಿಂದಲೇ ವೇದ್ಯವಾಗುವಂತಿದೆ. "ತಾನು ರಾಜ್ಯದ ರಾಜಕೀಯದಲ್ಲಿ ಸಕ್ರಿಯವಾಗಿ ಪಕ್ಷ ಬಲವರ್ಧನೆಗಾಗಿ ತನ್ನ ಬದುಕನ್ನೇ ಮುಡಿಪಾಡುತ್ತೇನೆ. ಅನ್ನುವುದರ ಜೊತೆಗೆ ಮಗ ವಿಜೇಂದ್ರನಿಗೆ ಮಂತ್ರಿ ಪದವಿಯ ಪಟ್ಟಾಭಿಷೇಕವಾಗ ಬೇಕು ಅನ್ನುವ ಮನದಾಳದ ಬೇಡಿಕೆಯನ್ನು ಹೊರಗಿಡುತ್ತಿದ್ದಾರೆ ಅನ್ನುವ ಮಾತು ಬಿಜೆಪಿಯ ವರಿಷ್ಠ ಮಣಿಗಳಿಗೆ ತಲುಪಿದ ಮರುಕ್ಷಣದಲೇ ಇನ್ನೊಂದು ಬ್ರಹ್ಮಾಸ್ತ್ರ ತಯಾರು ಮಾಡುವ ಸಿದ್ದತೆ ಆಗಿದೆಯೊ? ಅನ್ನುವ ಗಾಳಿ ಬಲವಾಗಿ ರಾಜಕೀಯ ವಲಯದಲ್ಲಿ ಬೀಸಲು ಶುರುವಾಗಿದೆಯಂತೆ.
ಹಾಗಾದರೆ ಈ ಪ್ರತಿ ಅಸ್ತ್ರ ಹೇಗಿದೆ ಅಂದರೆ ಅದೂ ಕೂಡಾ ತುಂಬಾ ಹಳೆಯ ಅಸ್ತ್ರ ಯಾವ ಕಾಲಕ್ಕೂ ಸದಾ ಸಿದ್ದವಾಗಿ ಕಾದುಕೊಂಡಿರುವ ಬ್ರಹ್ಮಾಸ್ತ್ರವೂ ಹೌದು.
ಇಂದು ದಿಢೀರಾಗಿ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿಯವರು ತಮ್ಮ ರಾಜಕೀಯ ಶಿಕ್ಷಣ ಪೀಠದ ಮೂಲ ಗುರು ಮಾಜಿ ಪ್ರಧಾನಿ ದೇವೇಗೌಡರನ್ನು ಮುಖತಃ ಕಂಡು ಪಾದಕ್ಕೆ ನಮಸ್ಕರಿಸಿ ಆಶೀರ್ವಾದ ಪಡೆದು ಬಂದರು. ತಮ್ಮ ಶಿಷ್ಯ ಬರುವಿಕೆಯ ನಿರೀಕ್ಷೆಯಲ್ಲಿಯೇ ಇದ್ದ ಮಹಾ ಗುರುಗಳು ಶಿರ ಮುಟ್ಟಿ ಆಪತ್ಕಾಲಕ್ಕೆ ನಾ.. ಇದ್ದೇನೆ ಹೇೂಗಿ ಬಾ.. ಶಿಷ್ಯನೇ ಎಂದು ಮನಸಾರೆ ಹರಸಿ ಬೀಳ್ಕೊಟಿದ್ದಾರೆ ಅನ್ನುವ ಸುದ್ದಿ ಈಗ ತಾನೇ ಬಂದಿದೆ.
ಗುರುವಿನ ಆಶೀರ್ವಾದ ಪಡೆದ ಶಿಷ್ಯ ಮುಖ್ಯಮಂತ್ರಿ ಬೊಮ್ಮಾಯಿ ಇಂದು ಸಂಜೆಯೇ ದೆಹಲಿಗೆ ಪಯಾಣ ಬೆಳೆಸುತ್ತಾರೆ ಅನ್ನುವುದು ಕೂಡಾ ಅಷ್ಟೇ ಕುತೂಹಲದ ಬೆಳವಣಿಗೆ. ಅಂದರೆ ನಾಳೆ ತರುವ ಮಂತ್ರಿಮಾಗಧರ ಪಟ್ಟಿಯಲ್ಲಿ ಯಡಿಯೂರಪ್ಪನವರ ಕುವರ ಹೆಸರು ಇಲ್ಲದೇ ಹೇೂದಲ್ಲಿ ಮುಂದಿನ ರಾಜಕೀಯ ಮೇಲಾಟಗಳಿಗೆ ದೇವೇಗೌಡರ ಆಶೀರ್ವಾದ ಸದ್ಯಕ್ಕೆ ತಡೆ ಒಡ್ಡಬಹುದು ಅನ್ನುವುದು ಇಂದಿನ ತಕ್ಷಣದ ರಾಜಕೀಯ ಲೆಕ್ಕಾಚಾರವೂ ಕೂಡಾ. ಒಂದು ರೀತಿಯಲ್ಲಿ ದೇವೇಗೌಡರ ಶಕ್ತಿ ರಾಜ್ಯದ ರಾಜಕೀಯದಲ್ಲಿ "ತಡೆ ರಾಜ್ಯ ಸಿದ್ಧಾಂತದ" (buffer state) ತರಹ ಹಾಗಾಗಿ ಬೊಮ್ಮಾಯಿ ಸರ್ಕಾರ ಸಮಯ ಪೂರ್ತಿ ಆಡಳಿತ ನಡೆಸ ಬೇಕಾದರೆ ಆದಿ ಮಹಾಗುರುವಿನ ಉಪಸ್ಥಿತಿಯೂ ಅನಿವಾರ್ಯ ಅನ್ನುವುದು ಇಂದಿನ ಹೊಸ ರಾಜಕೀಯ ವಿದ್ಯಮಾನವೂ ಹೌದು.
-ಕೊಕ್ಕರ್ಣೆ ಸುರೇಂದ್ರನಾಥ ಶೆಟ್ಟಿ ಉಡುಪಿ
(ಉಪಯುಕ್ತ ನ್ಯೂಸ್)
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ


