ಅಣ್ಣ- ತಂಗಿಯ ಮಮತೆಯ ಅನುಬಂಧನ: ರಕ್ಷಾಬಂಧನ

Upayuktha
0


ಅಣ್ಣನೊಬ್ಬ ತಂಗಿಗೋ, ತಂಗಿಯೊಬ್ಬಳು ಅಣ್ಣನಿಗೋ ಬಂಧಿಸುವ ಬಣ್ಣ ಬಣ್ಣದ ರಕ್ಷೆಯ ದಾರದಲ್ಲಿ ಅನ್ಯಾದೃಶ ಪ್ರೀತಿಯ ಎರಕವಿರುತ್ತದೆ.


ಪೌರಾಣಿಕವಾಗಿ, ಐತಿಹಾಸಿಕವಾಗಿ, ಜಾನಪದಿಕವಾಗಿ ಮಹತ್ವಪೂರ್ಣತೆಯನ್ನು ಹೊಂದಿದ ರಾಖಿ ಹಬ್ಬವು ಭಾವನಾತ್ಮಕವಾಗಿ ಮನಸ್ಸಿಗಿಳಿಯುವ ಆಚರಣೆಯಾಗಿದೆ. ಹೃದಯ ಹಾರೈಸುವ ವಾತ್ಸಲ್ಯದ ಶುಭಾಶಯವನ್ನು ರಕ್ಷೆಯ ದಾರಗಳಿಂದ ಬಿಗಿಗೊಳಿಸುವ ಹಬ್ಬವಾಗಿ ಸಾಹೋದರ್ಯ ಸಂಬಂಧದ ನೆಲೆ ಮತ್ತು ಮಾನವೀಯತೆಯ ಸೆಲೆಯನ್ನು ಎತ್ತರಕ್ಕೇರಿಸುತ್ತದೆ.


ಹಿಂದೂ ಕ್ಯಾಲೆಂಡರ್ ಪ್ರಕಾರ ಶ್ರಾವಣ ಮಾಸದ ಹುಣ್ಣಿಮೆಯಂದು ರಕ್ಷಾ ಬಂಧನವನ್ನು ಆಚರಿಸಲಾಗುತ್ತದೆ. ರಾಖಿಯನ್ನು ಸಹೋದರಿ ಸಹೋದರನ ಮಣಿಕಟ್ಟಿಗೆ ಕಟ್ಟುತ್ತಾರೆ. ಜತೆಗೆ, ಸಹೋದರ ತನ್ನ ಸಹೋದರಿಗೆ ಉಡುಗೊರೆಯನ್ನು ನೀಡಬೇಕಿದೆ. ದುಬಾರಿ ಅಥವಾ ಅಗ್ಗ- ಹೀಗೆ ಯಾವುದೇ ಉಡುಗೊರೆಯನ್ನು ನೀಡಿದರೆ ಸಾಕು.


ಭಾರತದಲ್ಲಿ, ಸಹೋದರ ಮತ್ತು ಸಹೋದರಿಯ ನಡುವಿನ ಬಾಂಧವ್ಯವನ್ನು ಬಲಪಡಿಸುವ ಹಬ್ಬವೆಂದರೆ ರಕ್ಷಾ ಬಂಧನ. ಶ್ರಾವಣ ಮಾಸದ ಹುಣ್ಣಿಮೆಯ ದಿನದಂದು ಈ ಹಬ್ಬವನ್ನು ಆಚರಿಸಲಾಗುತ್ತದೆ. ಈ ವರ್ಷ ಆಗಸ್ಟ್ 22ರಂದು ರಕ್ಷಾಬಂಧನವನ್ನು ಆಚರಿಸಲಾಗುತ್ತಿದೆ. ಪ್ರತಿ ಸಹೋದರಿಯು ಪ್ರತಿವರ್ಷ ತನ್ನ ಸಹೋದರರ ಮಣಿಕಟ್ಟಿನ ಮೇಲೆ ‘ರಾಖಿ’ ಎಂದು ಕರೆಯಲ್ಪಡುವ ಪವಿತ್ರ ದಾರವನ್ನು ಕಟ್ಟಲು ಕಾಯುತ್ತಾಳೆ.


ಇತಿಹಾಸ, ದಂತಕಥೆ:-

ದಂತಕತೆಗಳ ಪ್ರಕಾರ ಅಲೆಕ್ಸಾಂಡರನು ಭಾರತದ ಮೇಲೆ ದಂಡೆತ್ತಿ ಬಂದಾಗ ಅವನನ್ನು ಧೈರ್ಯದಿಂದ ಎದುರಿಸಿದವನು ಪೋರಸ್. ಆಗ ಅವರಿಬ್ಬರ ನಡುವೆ ಯುದ್ಧ ಆರಂಭಗೊಂಡಿತು. ಇದೇ ಸಮಯದಲ್ಲಿ ಅಲೆಕ್ಸಾಂಡರನ ಪತ್ನಿ ರೊಕ್ಸಾನಳು ಪೋರಸ್‌ಗೆ ಒಂದು ಪವಿತ್ರ ದಾರವನ್ನು (ರಾಖಿ) ಕಳುಹಿಸಿದಳು. ಅದರ ಜೊತೆಗೆ ಒಂದು ಮನವಿ ಸಹ ಇತ್ತು. ತನ್ನ ಪತಿಯನ್ನು ಕೊಲ್ಲದಿರುವಂತೆ ಕೇಳಿಕೊಂಡ ಮನವಿ ಅದಾಗಿತ್ತು. ಮುಂದೆ ನಡೆದ ಯುದ್ಧದಲ್ಲಿ ಪೋರಸ್ ಅಲೆಕ್ಸಾಂಡರನನ್ನು ಕೊಲ್ಲದೆ ಉಳಿಸಿದನು. ಇದಕ್ಕೆ ಕಾರಣ ಆತನ ಕೈಯಲ್ಲಿ ಆತ ಕಟ್ಟಿಕೊಂಡಿದ್ದ ರಾಖಿ ಅವನನ್ನು ತಡೆದು ನಿಲ್ಲಿಸಿತ್ತು.


ರಕ್ಷಾಬಂಧನದ ಮಹತ್ವ, ಪ್ರಾಮುಖ್ಯತೆ:-

ರಕ್ಷಾಬಂಧನಕ್ಕೆ ಭಾರತದಲ್ಲಿ ಹೆಚ್ಚು ಮಹತ್ವವಿದೆ. ಇದನ್ನು ಹಬ್ಬದಂತೆ ಆಚರಿಸಲಾಗುತ್ತದೆ. ಸಹೋದರ - ಸಹೋದರಿಯರ ನಡುವಿನ ಪ್ರೀತಿಗೆ ಈ ದಿನ ಸಮರ್ಪಣೆಯಾಗಿದೆ. ಹಿಂದೂ ಧರ್ಮದಲ್ಲಿ ರಕ್ಷಾ ಬಂಧನಕ್ಕೆ ಹೆಚ್ಚು ಪ್ರಾಮುಖ್ಯತೆ ಇದೆ.


ರಕ್ಷಾ ಬಂಧನ ರಕ್ಷೆ (ರಕ್ಷಣೆ) ಹಾಗೂ ಬಂಧನ (ಸಂಬಂಧ) ಎಂಬ ಎರಡು ಪದಗಳಿಂದ ಕೂಡಿದೆ. ಪ್ರಸ್ತುತ, ಈ ಹಬ್ಬವು ಸಹೋದರ-ಸಹೋದರಿಯರ ನಡುವಿನ ಪ್ರೀತಿ ಮತ್ತು ಬಂಧದ ಸಮಾನಾರ್ಥಕವಾಗಿದೆ ಮತ್ತು ಇದು ಸಹೋದರಿ ಮತ್ತು ಸಹೋದರರ ನಡುವಿನ ಪ್ರೀತಿಯನ್ನು ಬಲಪಡಿಸುವ ಮತ್ತು ಪುನರುಚ್ಚರಿಸುವ ಉತ್ಸವವಾಗಿದೆ ಎಂದು ಹೇಳಬಹುದು. ಒಂದು ಕಡೆ, ಸಹೋದರನು ತನ್ನ ಸಹೋದರಿಯನ್ನು ನೋಡಿಕೊಳ್ಳುವುದಾಗಿ ಮತ್ತು ತನ್ನ ಜೀವನಪರ್ಯಂತ ಅವಳನ್ನು ರಕ್ಷಿಸುವುದಾಗಿ ಭರವಸೆ ನೀಡುತ್ತಾನೆ. ಮತ್ತೊಂದೆಡೆ, ಸಹೋದರಿ ತನ್ನ ಸಹೋದರನ ದೀರ್ಘಾಯುಷ್ಯಕ್ಕಾಗಿ ಪ್ರಾರ್ಥಿಸುತ್ತಾಳೆ.


ರಕ್ಷಾ ಬಂಧನದ ಇತಿಹಾಸ ಏನು ಗೊತ್ತಾ? ರಾಖಿಯ ಮಹತ್ವ, ಪ್ರಾಮುಖ್ಯತೆ:-

ಈ ದಿನ, ಸಹೋದರಿ ತನ್ನ ಸಹೋದರರ ಮಣಿಕಟ್ಟಿನ ಮೇಲೆ ಕಟ್ಟುವ ರೇಷ್ಮೆ ದಾರವು ಕೇವಲ ಒಂದು ದಾರವಲ್ಲ. ಅದು ಇಬ್ಬರ ನಡುವಿನ ಶುದ್ಧ, ಪವಿತ್ರ ಮತ್ತು ನಿರಂತರ ಪ್ರೀತಿಯ ಗುರುತು, ಜೊತೆಗೆ ಶಾಶ್ವತ ರಕ್ಷಣೆಗಾಗಿ ಮಂತ್ರದೊಂದಿಗೆ ಬೆರೆತಿದೆ. ಸಹೋದರಿ ಮದುವೆಯಾದಾಗಲೂ, ಸಹೋದರಿಯರ ಮನೆಗೆ ಭೇಟಿ ನೀಡಿ ಮತ್ತು ಆಕೆಯಿಂದ ರಾಖಿಯನ್ನು ಕಟ್ಟಿಸಿಕೊಳ್ಳುವುದನ್ನು ಮರೆಯುವುದಿಲ್ಲ.


ರಕ್ಷಾ ಬಂಧನಕ್ಕೆ ಪ್ರತಿ ಹಿಂದೂ ಮನೆಗಳಲ್ಲಿ ಹಬ್ಬದ ತಿಂಗಳು ಬರುವ ಮುನ್ನವೇ ತಯಾರಿಗಳು ಆರಂಭವಾಗಿರುತ್ತದೆ. ಸಹೋದರನಿಗೆ ಕಟ್ಟಲು ರಾಖಿಯನ್ನು ಆಯ್ಕೆ ಮಾಡುವ ವಿಚಾರದಲ್ಲೂ ಸಹೋದರಿ ಖುಷಿ ಖುಷಿಯಾಗಿ ಇರುತ್ತಾರೆ. ರಕ್ಷಾ ಬಂಧನದ ಹಿಂದಿನ ದಿನ ರಾತ್ರಿಯೇ ಸಿಹಿ ತಿಂಡಿಗಳನ್ನು ತಯಾರು ಮಾಡಲಾಗುತ್ತದೆ.


ರಕ್ಷಾ ಬಂಧನದ ದಿನ ಕುಟುಂಬದ ಪ್ರತಿಯೊಬ್ಬ ಸದಸ್ಯರು ಬೆಳಗ್ಗೆ ಬೇಗ ಎದ್ದು ಆಚರಣೆಗಳನ್ನು ಆರಂಭಿಸುತ್ತಾರೆ. ‘ರೋಲಿ’, ಭತ್ತದ ಧಾನ್ಯಗಳು, ‘ದಿಯಾ’, ಸಿಹಿತಿಂಡಿಗಳು ಮತ್ತು ರಾಖಿಗಳಿಂದ ಅಲಂಕರಿಸಲಾಗುತ್ತದೆ. ಮನೆಯಲ್ಲಿ ಒಬ್ಬಳೇ ಹೆಣ್ಣು ಮಗಳಿದ್ದರೆ ಅಥವಾ ಸಹೋದರನನ್ನು ಹೊಂದಿರದಿದ್ದರೆ ಸಾಮಾನ್ಯವಾಗಿ ಸೋದರ ಸಂಬಂಧಿ ಅಥವಾ ಅವಳು ತನ್ನ ಸಹೋದರ ಎಂದು ಹೇಳಿಕೊಳ್ಳುವ ಯಾರೊಂದಿಗಾದರೂ ಆಚರಣೆಗಳನ್ನು ಮಾಡುತ್ತಾರೆ. ಈ ಹಬ್ಬವು ಒಡಹುಟ್ಟಿದವರು ಒಟ್ಟಿಗೆ ಬೆಳೆಯುವ ಮಹತ್ವವನ್ನು ಅರಿತುಕೊಳ್ಳಲು ಸಹಾಯ ಮಾಡುತ್ತದೆ.


- ಶ್ರವಣ್ ಕಾರಂತ್ ಕೆ

ಸುಪ್ರಭಾತ

ಶಕ್ತಿನಗರ ಮಂಗಳೂರು.

+91 8971275651


Post a Comment

0 Comments
Post a Comment (0)
Maruti Suzuki Festival of Colours
Maruti Suzuki Festival of Colours
To Top