ಸಂಸ್ಕೃತದ ಮೇಲಿನ ಪ್ರೀತಿಯು ಪಶ್ಚಿಮದಾದ್ಯಂತ ಹರಡಿರುವ ಪ್ರಸ್ತುತ ಕಾಲಘಟ್ಟದಲ್ಲಿ ಅದು ಜನಿಸಿ ಉತ್ತುಂಗ ತಲುಪಿಯೂ ಅವಗಣನೆಗೆ ಈಡಾಗಿರುವ ನಮ್ಮದೇಶದ ಪ್ರಸಕ್ತ ಸ್ಥಿತಿಯು ಪ್ರೋತ್ಸಾಹದಾಯಕವಾಗಿ ತೋರದು. ಗೀರ್ವಾಣವಾಣಿಯ ಪುನರುತ್ಥಾನಕ್ಕಾಗಿ ಅನೇಕ ಸಂಬದ್ಧ ಕೈಂಕರ್ಯಗಳು ನಡೆದಿರುವುದೂ ದಿಟ. ಏಕೈಕ ಜ್ಞಾನ ಭಂಡಾರದ ತವನಿಧಿ ನಮ್ಮ ಸಂಸ್ಕೃತವು. ಸಂಸ್ಕರಣಗೊಂಡದ್ದೇ ಸಂಸ್ಕೃತಿಯಾಗಿ ರೂಪುಗೊಂಡಲ್ಲಿ ಭವಿಷ್ಯದ ತಲೆಮಾರುಗುಳು ಸದೃಢವಾಗುವುದು ಸುನಿಶ್ಚಿತ. ಭಾರತದ ಪುಣ್ಯಭೂಮಿಯಲ್ಲಿ ಜನಿಸಿದ ನಾವೇ ಅದೃಷ್ಟವಂತರು. ಈ ಭೂಮಿಯಲ್ಲಿ ಅಸಂಖ್ಯಾತ ವಿದ್ವಾಂಸರು ದ್ರಷ್ಟಾರರು ತಮ್ಮ ಅಮೂಲ್ಯವಾದ ಉದ್ಗ್ರಂಥಗಳನ್ನು ಮುಂದಿನ ಪೀಳಿಗೆಯ ಬೌದ್ಧಿಕ ಉನ್ನತಿಗಾಗಿ ಬಿಟ್ಟು ನಡೆದಿದ್ದಾರೆ.
ಸರ್ವಮಾನ್ಯ ಡಿ.ವಿ.ಜಿ.ಅವರ ಸಮಕಾಲೀನರಾಗಿದ್ದ ಮಹಾಮಹೋಪಾಧ್ಯಾಯ ದಿವಂಗತ ವಿದ್ವಾನ್ ಎನ್. ರಂಗನಾಥ್ ಶರ್ಮಾಜಿಯವರನ್ನು ಭಾರತದ ಪ್ರಬುದ್ಧ ವಿದ್ವಾಂಸರ ನಡುವೆ ಗುರುತಿಸಲಾಗುತ್ತದೆ. ಶ್ರೀಯುತರ “ಕಾವ್ಯೋದ್ಯಾನಮ್”, ಪ್ರಚಲಿತ ಸಾಹಿತ್ಯದ ಪ್ರಮುಖ ಕೃತಿಗಳಲ್ಲೊಂದು ಎಂಬುದಾಗಿ ಪರಿಗಣಿತ.
“ಏಕಚಕ್ರಮ್”, ಚತುರಂಕಗಳ ಲಘುರೂಪಕವಾಗಿದ್ದು ವಿದ್ವಾನ್ ಶರ್ಮಾಜಿ ಅವರ ಮಹತ್ವದ ರಚನೆ ಎನಿಸಿದೆ. ದ್ವಾಪರಯುಗದ ಭೀಮ ಮತ್ತು ಬಕಾಸುರರ ನಡುವಣ ಸಂವಾದ-ಸಂವಹನ ಸರಣಿಯ ಸಾರಸಂಗ್ರಹವೇ ನಾಟಕದ ಅಡಕವಾಗಿರುವುದಲ್ಲದೇ ಬಕಾಸುರ ವಧೆ, ಶಿಷ್ಟ ರಕ್ಷಣದ ಸಾರ್ವಕಾಲಿಕ ಸವಾಲನ್ನೂ ಉದ್ದೀಪಿಸುತ್ತದೆ.
'ಏಕ ಚಕ್ರಮ್' ನಾಟಕದಡಕವು ಕಲಿಯುಗದ ಹಲವಾರು ಸಾಮ್ಯತೆ ಮತ್ತು ಸೂಕ್ಷ್ಮಗಳ ಸಮೀಕೃತ ಪ್ರಸ್ತುತಿ ಎಂಬುದಿಲ್ಲಿ ಗಮನೀಯ. ಕೃತಿಯ ಧರ್ಮಾರ್ಥಕಾಮಮೋಕ್ಷ ಗಳ ಮಾರ್ಮಿಕ ವಿಶ್ಲೇಷಣೆಯು ದೃಶ್ಯಸಾಹಸವಾಗಿ “ಏಕಚಕ್ರಮ್” ಶೀರ್ಷಿಕೆಯಡಿ ನಿರ್ಮಾಣಗೊಳ್ಳುತ್ತಲಿದೆ. ಸತ್ಪುರುಷರ ಧರ್ಮನಿಷ್ಠೆ, ಮಾನವ ಸಂವೇದನೆ, ದುಷ್ಟಸಂಹಾರ, ಉದಾತ್ತತೆಯ ಸವಿವರ ಪರಾಮರ್ಶೆಯೇ ಏಕಚಕ್ರಮ್ ನ ಮುಖ್ಯ ಉದ್ದಿಶ್ಯ. ಪೂರ್ಣಪ್ರಮಾಣದ ಸಂಸ್ಕೃತಕಥಾಚಿತ್ರವಾದ " ಏಕ ಚಕ್ರಮ್” ನ ಮೂಲ ರಚನೆ ಮಹಾಮಹೋಪಾಧ್ಯಾಯ ವಿದ್ವಾನ್ ಶ್ರೀ ಎನ್. ರಂಗನಾಥಶರ್ಮ , ಸಂಚಾಲಕಿ ಪ್ರೊ.ಎಸ್. ಆರ್ ಲೀಲಾ, ಚಿತ್ರದ ನಿರ್ದೇಶನ ಕೆ. ಸುಚೇಂದ್ರ ಪ್ರಸಾದ, ಕಲಾ ಸಂಪದ ಲಲಿತ ಕಲಾ ಕೇಂದ್ರದ ವಿದುಷಿ ಶ್ರೀಮತಿ ವೀಣಾ ಸಿ ಶೇಷಾದ್ರಿ, ನಿಧಿ ಸಂಗ್ರಹ ಸಹಾಯಕ್ಕಾಗಿನ ‘ಮಿಲಾಪ್‘, ಲಯನ್ಸ್ ಪ್ರೈಡ್ ಇಂಟರ್ ನ್ಯಾಷನಲ್ ನ ಲಯನ್. ಕೆ. ಶಿವಪ್ರಕಾಶ್, ಅರ್ಪಣ ಸೇವಾ ಸಂಸ್ಥೆಯ ಶ್ರೀ ಸುಂದರೇಶ, ಭಾರತೀಯ ಆಯುರ್ವೇದ ಪ್ರತಿಷ್ಠಾನದ ಡಾ. ಸಿ.ಎ.ಕಿಶೋರ ಮುಂತಾದ ಸಹೃದಯರ ಸಾಂದರ್ಭಿಕ ಸಹಯೋಗದೊಡನೆ ಸಂಪನ್ನವಾಗಲಿದೆ.
ಏಕಕಾಲಕ್ಕೆ ಕನ್ನಡದಲ್ಲಿಯೂ ನಿರ್ಮಾಣಗೊಳ್ಳಲಿರುವ “ಏಕಚಕ್ರಮ್ “ ಚಲನಚಿತ್ರವು, ಭೂತ-ವರ್ತಮಾನ ಮತ್ತು ಭವಿಷ್ಯದ ಸನ್ನಿವೇಶಗಳೊಂದಿಗೆ ತಳುಕು ಹಾಕಿಕೊಂಡಿರುವುದೊಂದು ವಿಶೇಷ. ಪ್ರಸಂಗ ಜರುಗಿ ಯುಗವೊಂದು ಸಂದ್ದಿದರೂ, ಮನುಕುಲವೇ ಬದಲಾಗಿದ್ದರೂ ಮನಃಸ್ಥಿತಿಯು ಮಾತ್ರ ಬದಲಾಗದಿರುವ ದುರಂತದ ಪ್ರಾತ್ಯಕ್ಷಿಕೆ “ಏಕ ಚಕ್ರಮ್ “ ನ ವಿಶಿಷ್ಟ್ಯ. ಸದ್ಯದ ವ್ಯವಸ್ಥೆಯು ಮರೆತಿರುವ ನೈತಿಕತೆಯ ಪುನರುತ್ಥಾನ, ಮರುಮೌಲ್ಯಮಾಪನಗಳೂ ಈ ದೃಶ್ಯಸಾಹಸದ ಪ್ರಮುಖ ಭಾಗವಾಗಿರಲಿದೆ. ಮಹಾಕಾವ್ಯವಾದ ಮಹಾಭಾರತದ ಘಟನೆಗಳ ಸರಣಿಯು ಇಂದಿಗೂ ಪ್ರಸ್ತುತವಾಗಿದ್ದು ಸಾಂಪ್ರದಾಯಿಕ ಮೌಲ್ಯಾನುಷ್ಠಾನ ದಾಖಲೆಗಳನ್ನು ಪರಿಚಯಿಸುವ ಮತ್ತು ಸಂರಕ್ಷಿಸುವ ಚಲನಚಿತ್ರವಾಗಿರಲಿದೆ "ಏಕಚಕ್ರಮ್”. ದೇಣಿಗೆ ನೀಡಿಕೆಯ ಉದಾರ ಆಸಕ್ತಿ ಉಳ್ಳವರು ಸಂಪರ್ಕಿಸಲು ಕೋರಿದೆ.
https://milaap.org/fundraisers/support-to-complete-the-movie/deeplink?deeplink_type=upi
(ಉಪಯುಕ್ತ ನ್ಯೂಸ್)
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ