ಬದುಕಿನ ಸಹಜ ಪಯಣದಲ್ಲಿ ಎಲ್ಲವೂ ಸಂಬಂಧಗಳೇ...

Upayuktha
0


ಕೊಲ್ಲಲೇ ಬೇಕಿತ್ತು ಆ ಸಂಬಂಧವನ್ನು, ನನಗಾಗಿ ನಿನಗಾಗಿ ನಮಗಾಗಿ, ಇಲ್ಲದಿದ್ದರೆ ಸಂಬಂಧವೇ ಕೊಲ್ಲುತ್ತಿತ್ತು ನಮ್ಮನ್ನು, ಅದು ಪಾಪವೂ ಅಲ್ಲ, ಪ್ರಾಯಶ್ಚಿತ್ತವೂ ಅಲ್ಲ, ಬದುಕಿನ ಸಹಜ ಪಯಣ.


ಪ್ರೀತಿಯೇ ಅತ್ತಾಗ - ಮೌಲ್ಯವೇ ಸತ್ತಾಗ, ಸಂಬಂಧವೇ ವಿಷವಾಗುತ್ತದೆ. ಭಾವನೆಯೇ ಬರಿದಾದಾಗ, ಮನಸ್ಸೇ ಕಲ್ಲಾದಾಗ, ಸಂಬಂಧವೇ ಇರಿಯುತ್ತದೆ. 


ಬದುಕಿಕಾಗಿ ಸಂಬಂಧವೇ ಹೊರತು, ಸಂಬಂಧಕ್ಕಾಗಿ ಬದುಕಲ್ಲಾ, ನೆಮ್ಮದಿಗಾಗಿ ಸಂಬಂಧವೇ ಹೊರತು, ಸಂಬಂಧದಿಂದ ಕ್ಷೋಭೆ ತರವಲ್ಲ.


ಬದಲಾಗುತ್ತಿದೆ ಪ್ರೀತಿಯ ಅರ್ಥಗಳು, ಬದಲಾಗುತ್ತಿದೆ ನಮ್ಮ ಪಾತ್ರಗಳು, ಬರಿದಾಗುತ್ತಿವೆ ನಮ್ಮ ಸಂಬಂಧಗಳು, ಹೊಮ್ಮಿಸುತ್ತಿವೆ ಹೊಸ ಹೊಸ ಆಲೋಚನಗಳು, ಚಿಮ್ಮಿಸುತ್ತಿವೆ ಬೇರೆ ಬೇರೆ ಕನಸುಗಳು,


ಒಳ್ಳೆಯದೋ ಕೆಟ್ಟದ್ದೋ, ಒತ್ತಡಕ್ಕೊಳಗಾಗಿದೆ ಸಂಬಂಧಗಳು, ಕುಸಿಯುತ್ತಿದೆ ಅನುಬಂಧಗಳು, ಆಗೊಮ್ಮೆ ಜ್ವಾಲಾಮುಖಿ, ಒಮ್ಮೊಮ್ಮೆ ಭೂಕಂಪ, ಮತ್ತೊಮ್ಮೆ ಸುನಾಮಿ, ಉಳಿಯುವುದೆಲ್ಲಿ ಸಂಬಂಧ,


ಅಗ್ನಿ ಸಾಕ್ಷಿ ಆರಿತು, ಮನಸ್ಸಾಕ್ಷಿ ಮುರಿಯಿತು, ಸಂಬಂಧ ಕಮರಿತು. ಅದಕ್ಕಾಗಿಯೇ ಹೇಳಿದ್ದು, ಕೊಲ್ಲಲೇ ಬೇಕಿತ್ತು ಸಂಬಂಧವನ್ನು, ಇಲ್ಲದಿದ್ದರೆ ಸಂಬಂಧವೇ ಕೊಲ್ಲುತ್ತಿತ್ತು.


ಅದಕ್ಕಾಗಿ ವಿಷಾದವಿಲ್ಲ, ಬರುವುದೂ ಒಂಟಿಯಾಗಿ, ಹೋಗುವುದೂ ಒಂಟಿಯಾಗಿ, ನೀನು ನೀನೆ - ನಾನು ನಾನೇ, ಸೃಷ್ಟಿಯ ಕೂಸುಗಳು, ಅದೇ ನಿಜವಾದ ಸಂಬಂಧ...


ಆಪಾದನೆಗಳು ಆರೋಪಗಳು ಕೋರ್ಟು ಕಚೇರಿಗಳ ಗೊಂದಲವೇ ಬೇಡ. ನಿನ್ನ ಇಷ್ಟ ನಿನಗೆ, ನನ್ನ ಸ್ವಾತಂತ್ರ್ಯ ನನಗೆ. ಮತ್ಯಾರೋ ಮೂಗು ತೂರಿಸುವುದು, ಇನ್ನಷ್ಟು ಕಸಿವಿಸಿ ಯಾಕೆ ಬೇಕು. ಇರುವ ನಾಲ್ಕು ದಿನಕ್ಕೆ.


ಉಳಿಸಿಕೊಂಡವರಿಗೆ ಅಭಿನಂದನೆಗಳು, ಕಳೆದುಕೊಂಡವರಿಗೆ ಧನ್ಯವಾದಗಳು, ಆದರೆಲ್ಲರಿಗೂ ಸ್ವಾಗತ, ಅದು ಕೂಡ ಸಂಬಂಧವೇ....


- ವಿವೇಕಾನಂದ. ಹೆಚ್.ಕೆ.

9844013068


(ಉಪಯುಕ್ತ ನ್ಯೂಸ್)



ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ


إرسال تعليق

0 تعليقات
إرسال تعليق (0)
Mandovi Motors Presents MONSOON BONANZA
Mandovi Motors Presents MONSOON BONANZA
To Top