[ತಾತ ಮತ್ತು ಮೊಮ್ಮಗಳ ಸಂಭಾಷಣೆ ರೂಪದಲ್ಲಿ ಬಾಲಗೀತೆ]
ಮೊಮ್ಮಗಳು: ಮನೆಯಲಿ ಕಾಣದೆ ತಾತನೆ ನಿನ್ನನು
ಭಯದಲಿ ಎಲ್ಲೆಡೆ ಹುಡುಕಿದ್ದೆ
ಬೆಳಗಿನ ಜಾವದಿ ಸುರಿಯುವ ಮಳೆಯಲಿ
ಹೇಳದೆ ಎಲ್ಲಿಗೆ ಹೋಗಿದ್ದೆ?/
ತಾತ: ಮೊಮ್ಮಗಳೇತಕೆ ನುಡಿಯುವೆ ಈತರ
ಮರೆತೆಯ ಇರುಳಲಿ ಅತ್ತಿದ್ದು
ಮೀನಿನ ಸಾರಿಗೆ ಹಟವನು ಮಾಡುತ
ಊಟವ ಮಾಡದೆ ಕೂತಿದ್ದು/
ಮೊ: ಶಾಲೆಗೆ ನನ್ನನು ಕರೆದೊಯ್ಯುವುದು
ಏತಕೆ ಈ ದಿನ ಮರೆತಿರುವೆ
ವೇಳೆಯದಾಗಲು ಚೀಲವ ಹಿಡಿಯುತ
ಅಮ್ಮನ ಜೊತೆಯಲಿ ಹೊರಟಿರುವೆ/
ತಾ: ಮೀನನು ಹಿಡಿಯಲು ಗಾಳದ ಜೊತೆಯಲಿ
ಹೊಳೆಕಡೆ ಬೇಗನೆ ಬಂದಿದ್ದೆ
ಹಾಕಿದ ಗಾಳಕೆ ಮೀನದು ಬೀಳಲು
ದಡದಲಿ ಕಾಯುತ ಕುಳಿತಿದ್ದೆ/
ಮೊ: ಅಂಗಿಯ ಹಾಕದೆ ರಸ್ತೆಯಲೇತಕೆ
ಬೇಗನೆ ಸೇರಿಕೊ ಮನೆಯನ್ನ
ತಾ: ಸರಿ ನಾ ನಡೆವೆನು ಸಂಜೆಗೆ ಜೊತೆಯಲಿ
ಮೀನಿನ ಸಾರನು ಸವಿಯೋಣ/
-ಪೆರ್ಮುಖ ಸುಬ್ರಹ್ಮಣ್ಯ ಭಟ್
(ಉಪಯುಕ್ತ ನ್ಯೂಸ್)
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ