ಚಿತ್ರ-ಕವನ: ಚೆಲುವಿನ ಬಾಲೆ

Upayuktha
0

ಶಾಲೆಗೆ ಹೋಗುವ  

ಬಾಲೆಯ ನೋಡಿರಿ  

ಕಾಲಲಿ ಚಿಮ್ಮುವ ನೀರಹನಿ | 

ಚೀಲವ ತಾರದೆ 

ಬೀಳುವ ತೆರದಲಿ  

ಮಾಲಿಸಿ ಪುಸ್ತಕ ಹಿಡಿದಿಹಳು || 


ಕೈಯಲಿ ಬಳೆಯನು 

ಮೈಯಲಿ ಹೊಳಪನು 

ಧೈರ್ಯವ ಮೊಗದಲಿ ತೋರುವಳು |  

ಸೊಯ್ಯನೆ ಓಡುತ  

ಒಯ್ಯನೆ ನೆಗೆಯುತ 

ವಯ್ಯಾರದ ನಗೆ ಬೀರುವಳು || 


ಒಸರನು ಚಿಮ್ಮಿಸಿ  

ಕೆಸರಿನ ಕಾಲಲಿ 

ಹಸುರಿನ ಲಂಗವ ತೋಯಿಸುತ | 

ಮುಸಿಮುಸಿ ನಗೆಯನು 

ಖುಷಿಯಲಿ ಬೀರುತ 

ಹಸಿಹಸಿ ಹುಲ್ಲನು ನೋಡುವಳು ||  


ಚೆಲುವಿನ ಬಾಲೆಯು 

ನಲಿಯುತ ಬರುವಳು 

ಜುಳುಜುಳು ನೀರನು ಹರಿಸುವಳು | 

ಫಳಫಳ ಹೊಳೆಯುವ  

ಕೊಳದಲಿ ಕುಣಿಯುತ  

ಮಳೆಯನು ನಾಚಿಸಿ ನಗುತಿಹಳು || 


ಬಿಳಿಬಿಳಿ ರವಿಕೆಯ

ಹೊಳೆಯುವ ರದನದ 

ಕಿಲಕಿಲ ನಗುವಿನ ಕಿರುಬಾಲೆ |  

ಜಲದಲಿ ಕುಣಿಯುವ

ಛಲವನು ತೋರುವ 

ಬಲುಹಿನ ಮುಗುದೆಗೆ ಶುಭವೆನ್ನಿ ||  

(ಮೇಲಿನ ಚಿತ್ರವನ್ನುದ್ದೇಶಿಸಿ ರಚಿಸಿದ ಶರಷಟ್ಪದಿಯ ಆಶು ಶಿಶುಗೀತೆ) 

 ವಿ.ಬಿ.ಕುಳಮರ್ವ ✍️







Tags

Post a Comment

0 Comments
Post a Comment (0)
Maruti Suzuki Festival of Colours
Maruti Suzuki Festival of Colours
To Top