ಅಡಿಕೆ ತೋಟ: ನಮ್ಮ ಹಿರಿಯ ಕಲ್ಪನೆ ಹೇಗಿತ್ತು ನೋಡಿ...

Upayuktha
0

ಸಾಂದರ್ಭಿಕ ಚಿತ್ರ


ಒಂದು ಪರಿಪೂರ್ಣ ಅಡಿಕೆ ತೋಟದ ಕಲ್ಪನೆ ನಮ್ಮ ಹಿರಿಯರದ್ದು ಹೇಗಿತ್ತು ಎಂದು ಯೋಚನೆ ಮಾಡೋಣ. ಆಗೆಲ್ಲ ಅಡಿಕೆ ತೋಟಕ್ಕೆ ಆಯ್ಕೆ ಮಾಡುತ್ತಿದ್ದರು ಕಣಿವೆ ಜಾಗವನ್ನು. ಎರಡು ಗುಡ್ಡಗಳ ಮಧ್ಯದಲ್ಲಿ ಬರುವ ವಿಶಾಲ ಜಾಗ. ಜಾಗದ ವಿಶಾಲತೆ ಜಾಸ್ತಿ ಇದ್ದರೆ ಅಲ್ಲಿ ಗದ್ದೆಗಳು ಇರುತ್ತಿದ್ದು ಅವಕ್ಕೆ ಬಯಲು ಗದ್ದೆಗಳು ಎಂದು ಹೆಸರು. ಸಣ್ಣ ಸಣ್ಣ ಕಣಿವೆಗಳಾದರೆ ಅಡಿಕೆ ತೋಟ. ಈ ಗುಡ್ಡಗಳಲ್ಲಿ ಕಾಡುಮರಗಳು. ಗುಡ್ಡಗಳ ಮರಗಳಿಂದಾಗಿ ಅಡಿಕೆ ತೋಟಕ್ಕೆ ಗಾಳಿಯ ರಕ್ಷಣೆ. ತೋಟದ ಸುತ್ತಲೂ ಹಲಸು, ಮಾವು, ಹುಣಸೆ, ದೀವಿ ಹಲಸು ಜಂಬುನೇರಳೆ ಇತ್ಯಾದಿ ಮರಗಳು. ದೂರದೂರಕ್ಕೆ ಕಿರಾಲುಬೋಗಿ, ಸಾಗುವಾನಿ ಮುಂತಾದ ಮೋಪಿನ ಮರಗಳು. ತೋಟದ ಮಧ್ಯದಲ್ಲಿ ಮುಂಡಿ, ಚೇವು, ಬಾಳೆ ಇತ್ಯಾದಿ ಆಹಾರ ಬೆಳೆಗಳು. ಆರ್ಥಿಕ ಮತ್ತು ಆಹಾರ ಬೆಳೆಗಳಿಗೆ ಸಮಾನ ಪ್ರಾಶಸ್ತ್ಯ.


ತೋಟಕ್ಕೆ ನೀರಿನ ಬಗ್ಗೆ ಅದೆಷ್ಟು ಯೋಚನೆ ಇತ್ತು ನೋಡಿ. ಆ ಕಣಿವೆಯಲ್ಲಿ ಒಂದಾದರೂ ತೋಡು ಇರಬೇಕಿತ್ತು ಮತ್ತು ತೋಡಿನ ನೀರ ಹರಿವು ದೀರ್ಘ ಇದ್ದಷ್ಟೂ ಜಾಗಕ್ಕೆ ಮೌಲ್ಯ ಜಾಸ್ತಿಇತ್ತು. ಮಳೆಗಾಲ ಮುಗಿದದ್ದೇ ತೋಡಿಗೆ ಕಟ್ಟಕಟ್ಟಿ ಜಲ ಮಟ್ಟವನ್ನು ಏರಿಸುತ್ತಿದ್ದರು. ನೀರೆತ್ತುವ ಯಂತ್ರಗಳು ಬಂದಮೇಲೆ ಕೆರೆಗಳನ್ನು ಮಾಡಿ ನೀರು ಬಳಸುತ್ತಿದ್ದರು. ಕೆಲವು ವರ್ಷಗಳ ನೀರ ಲಭ್ಯತೆಯ ಅನುಭವವನ್ನು ನೋಡಿಕೊಂಡು ಕಣಿವೆಯ ಬದಿಗಳಲ್ಲಿ ಉಳಿದ ಭಾಗಗಳಿಗೆ ಅಡಿಕೆ ಗಿಡ ನೆಟ್ಟು ವಿಸ್ತರಿಸುತ್ತಿದ್ದರು. ಗೊಬ್ಬರಕ್ಕಾಗಿ ಮನೆಯಲ್ಲಿ ಹಟ್ಟಿ ತುಂಬಾ ದನಗಳು. ಸೊಪ್ಪಿನ ಹಟ್ಟಿ ಗೊಬ್ಬರ ತುಂಬಿದಂತೆ ತೋಟಕ್ಕೆ ತಲೆಹೊರೆಯಲ್ಲಿ ಸಾಗಾಟ. ಆಹಾರದಲ್ಲಿ ಸ್ವಾವಲಂಬನೆ  ಇತ್ತು. ಆರ್ಥಿಕತೆಯಲ್ಲಿ ಎಳೆದಾಟ ಇತ್ತು. ಆದರೂ ನೆಮ್ಮದಿ ಇತ್ತು, ಪುರುಸೊತ್ತು ಇತ್ತು.


ತೋಟದ ಸುತ್ತಲಿರುವ ಹಲಸು ಮಾವಿನ ಮರಗಳಿಂದಾಗಿ ಬೇಸಿಗೆಯ ಕಾಲದಲ್ಲಿ ಪ್ರತಿ ಮನೆಯೂ ಹಪ್ಪಳ, ಸೆಂಡಿಗೆ, ಮಾಂಬಳ ಇತ್ಯಾದಿ ಆಹಾರದ ಕಾರ್ಖಾನೆಗಳಾಗಿದ್ದುವು. ಹೆಚ್ಚು ಕಮ್ಮಿ 80ರ ದಶಕದವರೆಗೆ ನಮ್ಮ ಕೃಷಿ ಕೃಷಿ ಸಂಸ್ಕೃತಿ ಹೀಗೆ ಇತ್ತು. ಆ ಹೊತ್ತಿಗಾಗಲೇ ರಾಸಾಯನಿಕ ಕೃಷಿ ನಮ್ಮೂರಲ್ಲಿ, ನಮ್ಮ ಮನೆಯಲ್ಲಿ ಪಾದಾರ್ಪಣೆ ಗೈದಿತ್ತು. ರಾಸಾಯನಿಕ ಗೊಬ್ಬರಗಳು ಬಳಸುವುದು ಸುಲಭವೂ, ಅಧಿಕ ಇಳುವರಿಯು ಕಂಡುಬಂದುದರಿಂದ ಮತ್ತು ಜೊತೆಜೊತೆಗೆ ಅಡಿಕೆಯ ಕ್ರಯದ ಸ್ಥಿರತೆ ಮತ್ತು ಮಾನ್ಯತೆ ಯಿಂದಾಗಿ ನಮ್ಮೆಲ್ಲಾ ಗದ್ದೆಗಳು ಅಡಿಕೆ ತೋಟಗಳಾದುವು. ಕೈಯಲ್ಲಿ ಹಣದ ಓಡಾಟ ಜಾಸ್ತಿಯಾದಂತೆ ಬೇಕುಗಳು ಜಾಸ್ತಿಯಾದವು. ಆ ಕಾರಣದಿಂದ ಕಣಿವೆಯಲ್ಲಿ ಇದ್ದಂತಹ ಅಡಿಕೆ ಗುಡ್ಡ ಹತ್ತಿತು. ಬೆಟ್ಟ ಹತ್ತಿತು. ಈಗಿತ್ತಲಾಗಿ ಪರ್ವತ ಶಿಖರಗಳನ್ನು ಹತ್ತುವುದನ್ನು ಕಾಣುತ್ತಿದ್ದೇವೆ. ನೀರಿಂಗಿಸಿ ಕೊಡುತ್ತಿದ್ದ ಬೆಟ್ಟ ಗುಡ್ಡಗಳು ನೀರು ಹೀರುವ ಬ್ಲಾಟಿಂಗ್ ಪೇಪರ್ ಗಳಾದವು. ನೀರ ಲಭ್ಯತೆಯನ್ನು ನೋಡಿಕೊಂಡು ವಿಸ್ತರಿಸುತ್ತಿದ್ದ ಕೃಷಿ,  ಅಪ್ರಾಕೃತಿಕವಾಗಿ ವಿಸ್ತರಿಸಿದ ಕೃಷಿಗಾಗಿ ನೀರು ಹುಡುಕುವಂತೆ ಆಯಿತು. ನನ್ನಾಕೆ ಬಳಸುವ ರೇಡಿಯೋದಲ್ಲಿ ಕಾಳಿಂಗರಾವ್ ಹಾಡಿರುವ ಈ ಹಾಡು ಕೇಳುತ್ತಿತ್ತು.


ಇಳಿದು ಬಾ ತಾಯಿ ಇಳಿದು ಬಾ,ಹರನ ಜಡೆಯಿಂದ ಹರಿಯ ಅಡಿಯಿಂದ ಋಶಿಯ ತೊಡೆಯಿಂದ ನುಸುಳಿ ಬಾ, ದೇವದೇವರನು ತಣಿಸಿ ಬಾ, ದಿಗ್ದಿಗಂತದಲಿ ಹಣಿಸಿ ಬಾ,  ಚರಾಚರಗಳಿಗೆ ಉಣಿಸಿ ಬಾ, ಎಂದು ಪೂಜಿಸಿ ಬರಬೇಕಿದ್ದ ನೀರು ಇಂದು,

ಏರಿ ಬಾ ತಾಯಿ ಏರಿ ಬಾ, ಯಾರಿಗೂ ಉಪಕರಿಸದಂತೆ ಏರಿ ಬಾ, ಅನುದಿನವೂ ವಿದ್ಯುತ್ತು ಕಂಪೆನಿಗೆ ಶಪಿಸುತ್ತ ಶಪಿಸುತ್ತ ಏರಿ ಬಾ!! ಎಂದಾಗಿದೆ.


-ಎ.ಪಿ. ಸದಾಶಿವ ಮರಿಕೆ


Key Words: Areca Plantation, Adike Thota, ಅಡಿಕೆ ತೋಟ, ಕರಾವಳಿಯ ಅಡಿಕೆ ತೋಟಗಳು


(ಉಪಯುಕ್ತ ನ್ಯೂಸ್)


ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ


Post a Comment

0 Comments
Post a Comment (0)
Mandovi Motors Presents MONSOON BONANZA
Mandovi Motors Presents MONSOON BONANZA
To Top