ಆ ದಿನಗಳು ಮತ್ತೆ ಬಾರದಿರಲಿ

Upayuktha
0


ಕೋವಿಡ್ 19 ಕೊರೊನಾ ವೈರಾಣು ನಿಯಂತ್ರಣಕ್ಕಾಗಿ 2020 ಮಾರ್ಚ್ 24ರಂದು ದೇಶ ಲಾಕ್ಡೌನಿಗೆ ಒಳಗಾಯಿತು. ವ್ಯವಹಾರಗಳು ಸ್ತಬ್ಧವಾದುವು. ಬದುಕು ಮೌನಕ್ಕೆ ಜಾರಿದುವು. ಎಂದೂ ನೋಡದ ಕರಾಳ ದಿನಮಾನಗಳು. ಮೇ ಬಳಿಕ ಹಂತಹಂತವಾಗಿ ಅನ್ಲಾಕ್ ಆದೇಶಗಳು ಬಂದುವು. ನಿಧಾನಕ್ಕೆ ಬದುಕು ತೆರೆದುಕೊಳ್ಳುತ್ತಾ ಬಂತು.  


ಲಾಕ್ಡೌನಿನ ಆರಂಭದ ದಿವಸಗಳು. ತಾಜಾ ಸುದ್ದಿಗಳನ್ನು ಬಿತ್ತರಿಸಲು ವಾಹಿನಿಗಳ ಪೈಪೋಟಿ. ಕ್ಷಣಕ್ಷಣದ ಬ್ರೇಕಿಂಗ್ ನ್ಯೂಸ್ಗಳ ಭರಾಟೆಗಳು. ಆಗಲೇ ದಿನಪತ್ರಿಕೆಗಳು ಆನ್ಲೈನ್ನತ್ತ ವಾಲಿದ್ದುವು. ಕೆಲವು ಪ್ರಕಟಣೆ ನಿಲ್ಲಿಸಿದುವು. ಹಾಗಾಗಿ ವಾಹಿನಿಗಳ ಹೊರತು ಬೇರೆ ಆಯ್ಕೆಗಳಿದ್ದಿರಲಿಲ್ಲ. ವಾಟ್ಸಾಪ್, ಫೇಸ್ಬುಕ್ನಂತಹ ನವಮಾಧ್ಯಮಗಳಲ್ಲಿ ಹರಿದು ಬರುವ ಸುದ್ದಿಗಳ ತಾಜಾತನಗಳನ್ನು ಅಳೆಯುವುದೇ ತಲೆನೋವಾಯಿತು.  


ಮುಂಜಾನೆ ಟಿವಿ ಚಾಲೂ ಮಾಡಿದರೆ ಸಾವುನೋವುಗಳ ವರದಿಗಳು. ಲಾಠಿ ಏಟುಗಳು. ದೂಷಣೆಗಳ ಮಾಲೆಗಳು. ಕಿಟ್ ವಿತರಣೆಯ ಗೊಂದಲಗಳು. ಲಾಕ್ ಡೌನ್ ಆದೇಶಗಳನ್ನು ಮುರಿಯುವ ಒಂದಷ್ಟು ಮನಸ್ಸುಗಳು. ರಾಜಕೀಯ ಮೇಲಾಟಗಳ ಚಿತ್ರಣಗಳು. ಅಂತೂ ಸುಮಾರು ಎರಡು ಮೂರು ತಿಂಗಳ ಋಣಾತ್ಮಕ ವಿಚಾರಗಳು ಮತಿಯನ್ನು ಕೆಡಿಸಿದ್ದುವು.  


ಬದುಕಿನಲ್ಲಿ ಧನಾತ್ಮಕ ಚಿಂತನೆಯನ್ನು ಪಾಸಿಟಿವ್ ಎಂದರೆ, ಋಣಾತ್ಮಕ ಯೋಚನೆಯನ್ನು ನೆಗೆಟಿವ್ ಎನ್ನುತ್ತೇವೆ. ಕೊರೊನಾ ಪರ್ವದಲ್ಲಿ ಪಾಸಿಟಿವ್ ಅಂದರೆ ಸೋಂಕಿತ, ನೆಗೆಟಿವ್ ಅಂದರೆ ಸೋಂಕುರಹಿತ ಎನ್ನುವ ಅರ್ಥ. ಬದುಕಿನ ಪಾಸಿಟಿವ್ ಅರ್ಥಕ್ಕೂ, ಕೊರೋನಾ ತಂದಿತ್ತ ಅರ್ಥಕ್ಕೂ ವಿಭಿನ್ನ ಅರ್ಥಗಳು. ಶಬ್ದಾರ್ಥವನ್ನೇ ಬದಲಿಸಿದ ಕೊರೊನಾ ಸುದ್ದಿಗಳಿಂದ ದೂರವಿರುವುದೇ ಸವಾಲಾಗಿತ್ತು.   


ಸರಿ, ವಾಹಿನಿಗಳು ಬಳಸಿದ ಪದಗಳತ್ತ ಒಮ್ಮೆ ಹೊರಳೋಣ. ಮಂಗಳೂರಿನಲ್ಲಿ ಒಂದು ಕೊರೊನಾ ವೈರಸ್ ದಾಖಲಾದ ದಿವಸ. ವಾಹಿನಿಯೊಂದು ಕರಾವಳಿ ವಿಲವಿಲ ಎಂದು ವರದಿ ಮಾಡಿತ್ತು. ವಿಲವಿಲ ಎನ್ನುವ ಪದದ ಅರ್ಥ ವ್ಯಾಪ್ತಿ ಏನು? ಒಂದು ಕೇಸ್ ದಾಖಲಾದ ತಕ್ಷಣ ಕರಾವಳಿ ವಿಲವಿಲ ಒದ್ದಾಡಿತೇ? ಬೆಚ್ಚಿ ಬೀಳಿಸಿದ, ಕಂಗಾಲು, ಅಟ್ಟಹಾಸ, ಮಹಾಮಾರಿ, ರಣಭಯಂಕರ, ಹೆಮ್ಮಾರಿ, ಶಾಕಿನಿ-ಡಾಕಿನಿ, ಗುರುವಾರದ ಗಂಡಾಂತರ, ಶನಿವಾರದ ಶನಿ... ಹೀಗೆ ದಿನಕ್ಕೊಂದು ಪ್ರಾಸಬದ್ಧ ಶೀರ್ಷಿಕೆಯ ವಿಶೇಷ ಕಾರ್ಯಕ್ರಮಗಳು.

-ನಾ. ಕಾರಂತ ಪೆರಾಜೆ

(ಉಪಯುಕ್ತ ನ್ಯೂಸ್)


Visit: Upayuktha Directory- You get here You want


‘ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ



Post a Comment

0 Comments
Post a Comment (0)
Maruti Suzuki Festival of Colours
Maruti Suzuki Festival of Colours
To Top