ಅಡುಗೆ ಮನೆ ಸುರಕ್ಷತೆ: ಪ್ರೆಶರ್ ಕುಕ್ಕರ್ ಕೂಡಾ ಅಪಾಯ ಒಡ್ಡಬಹುದು

Upayuktha
1

 


ನಿನ್ನೆ ವಾಟ್ಸಪ್‌ ಗ್ರೂಪು ಒಂದರಲ್ಲಿ ಅಕ್ಕ ಒಬ್ಬರು ಪ್ರೆಶರ್ ಕುಕ್ಕರಲ್ಲಿ ಅವರಲ್ಲಿ ಆದ ಅಪಘಾತದ ಬಗ್ಗೆ ಬರೆದರು. ಅದನ್ನು ಓದಿದಲಿಂದ ನನ್ನ ಮನದಲ್ಲಿ ನಿತ್ಯ ಉಪಯೋಗಿಸುವ ವಿದ್ಯುತ್ ಹಾಗೂ ನಿತ್ಯೋಪಯೋಗೀ ಉಪಕರಣಗಳ ಬಗ್ಗೆ ತೆಗೆದುಕೊಳ್ಳಬೇಕಾದ ಮುಂಜಾಗ್ರತೆಗಳ ಬಗ್ಗೆ ಜನರನ್ನು ಎಚ್ಚರಿಸಬೇಕಾದ ಅವಶ್ಯವಿದೆ ಎಂದು ಅನ್ನಿಸತೊಡಗಿತು. ಆದ್ದರಿಂದಲೇ ಈ ಲೇಖನ ಮಾಲೆ.


ಒಮ್ಮೆಗೆ ಒಂದು ಉಪಕರಣದ ಬಗ್ಗೆ. ಯಾಕೆಂದರೆ ಒಂದು ಲೇಖನದಲ್ಲಿ ಎಲ್ಲದರ ಬಗ್ಗೆ ಬರೆಯಲು ಹೊರಟರೆ ಅದು ಅಸಾಧ್ಯದ ಕೆಲಸವಾದೀತು. ನೆನಪಿಡಲೂ ಕಷ್ಟವಾಗಬಹುದು. ಆದ್ದರಿಂದ ಒಂದೊಂದೇ ಉಪಕರಣಗಳ ಬಗ್ಗೆ ಬರೆಯುತ್ತಾ ಹೋಗುತ್ತೇನೆ.


ನಿಮಗೊಂದು ಸಂದೇಹ ಇರಬಹುದು. ಇವ ಯಾವ ಯೋಗ್ಯತೆಯ ಮೇಲೆ ಈ ಲೇಖನ ಮಾಲೆ ಬರೆಯುತ್ತಾನೆಂದು. ಆದ್ದರಿಂದ ಎರಡು ವಾಕ್ಯ ನನ್ನ ಬಗ್ಗೆ.


ನಾನು‌ ಕೇರಳ ಸರ್ಕಾರದ ಅಂಗೀಕೃತ ಎಲೆಕ್ಟ್ರಿಕಲ್ ಗುತ್ತಿಗೆದಾರ ಹಾಗೂ ಸುಪರ್ವೈಸರ್ ಆಗಿ 38 ವರ್ಷಗಳಷ್ಟು ಸಮಯ ಕೆಲಸ ಮಾಡಿರುತ್ತೇನೆ. ಒಂದಿಗೆ ವಿದ್ಯುತ್ ಉಪಕರಣಗಳ ರಿಪೇರಿ ಮೋಟರ್ ರಿವೈಂಡಿಂಗ್ ಹಾಗೆ ಕೃಷಿ ಉಪಕರಣಗಳ ರಿಪೇರಿ ಇತ್ಯಾದಿ ಕೆಲಸಗಳನ್ನು ಮಾಡುವುದು ಮಾಡಿಸುವುದು ಮಾಡ್ತಿದ್ದೆ. ಅದರಲ್ಲಿ ಸಿಕ್ಕಿದ ಅಲ್ಪ ಜ್ಞಾನ ಹಾಗೂ ಅನುಭವದ ಮೇಲೆ ಈ ಲೇಖನ ಮಾಲೆಯನ್ನು ಬರೆಯುತ್ತಿದ್ದೇನೆ.


ಸದ್ಯ ಪ್ರೆಶರ್ ಕುಕ್ಕರಿನಿಂದಲೇ ಸುರು ಮಾಡ್ತೇನೆ. ಇದನ್ನು ಉಪಯೋಗಿಸದ ಅಡಿಗೆ ಕೋಣೆ ಬಹಳ ಕಡಿಮೆ ಇರಬಹುದಷ್ಟೆ. ಆದರೆ ಯಾಕೋ ಇದರಲ್ಲಿ ತೆಗೆದುಕೊಳ್ಳಬೇಕಾದ ಮುಂಜಾಗ್ರತೆಗಳ ಬಗ್ಗೆ ಉದಾಸೀನವೇ ಜಾಸ್ತಿ. ಆದರೆ ಈ ಉದಾಸೀನ ಪ್ರಾಣಾಪಾಯವನ್ನು ಕೂಡಾ ತಂದೊಡ್ಡಬಹುದು ಎಂಬುದನ್ನು ತಿಳಿದವರು ಕಡಿಮೆ. ಆದ್ದರಿಂದ ಇಲ್ಲಿ ಪ್ರೆಶರ್ ಕುಕ್ಕರ್ ಉಪಯೋಗಿಸುವವರು ತೆಗೆದು ಕೊಳ್ಳಬೇಕಾದ ಮುಂಜಾಗ್ರತೆಗಳ ಬಗ್ಗೆ ಬರೆಯುತ್ತೇನೆ.


ನಂಬರ್ ಒಂದು:- ಪ್ರೆಶರ್ ಕುಕ್ಕರಿನ ಮುಚ್ಚಳದಲ್ಲಿ ಆವಿ (ಸ್ಟೀಮ್) ಹೋಗುವ ತೂತಿನ ಬಗ್ಗೆ ಅಂದರೆ ಭಾರ (ವೈಟ್) ಇಡುವ ಅಡಿಯಲ್ಲಿರುವ ತೂತಿನ ಬಗ್ಗೆ. ದಿನಾ ಪ್ರೆಷರ್ ಕುಕ್ಕರ್ ತೊಳೆಯುವಾಗ ಆ ತೂತು ಮುಚ್ಚಿ ಹೋಗಿದೆಯೇ? ಎಂಬುದನ್ನು ಖಡ್ಡಾಯವಾಗಿ ನೋಡುವುದನ್ನು ಅಭ್ಯಾಸ ಮಾಡಿಕೊಳ್ಳಲೇ ಬೇಕು.

ಆ ತೂತಿನೊಳಗೆ ಹೋಗುವ ಅಳತೆಯ ಸರಿಗೆ, ಕಡ್ಡಿ ಯಾ ಸೂಜಿಯನ್ನು ಅದರೊಳಗೆ ತೂರಿಸಿ ಅದರೊಳಗೆ ಸಿಕ್ಕಿಕೊಂಡಿರಲು ಸಾಧ್ಯವಿರಬಹುದಾದ ವಸ್ತುಗಳನ್ನು ತೆಗೆಯಬೇಕು. ಆ ಮೇಲೆ ಆ ತೂತಿನ ಮೂಲಕ ಬಾಯಿಯಲ್ಲಿ ಊದಿ ಅಥವಾ ನೀರು ಹಾಕಿ ಆ ತೂತು ಸರಿಯಾಗಿ ಯಾವುದೇ ಅಡ್ಡಿ ಇಲ್ಲದೆ ಗಾಳಿ ಆಡುವಷ್ಟು ಶುಚಿಯಾಗಿದೆ ಎಂಬುದನ್ನು ಖಚಿತ ಪಡಿಸಿಕೊಳ್ಳಬೇಕು. ಆ ಮೇಲೆ ಪುನ: ತೊಳೆದು (ನೀವು ಬಾಯಿಯ ಮೂಲಕ ಗಾಳಿ ಹಾಕಿದ್ದರೆ ತೊಳೆಯ ಬೇಕು) ಉಪಯೋಗಿಸಬಹುದು.


ಎರಡನೇ ನೋಡ ಬೇಕಾದುದು ಪ್ರೆಶರ್ ವಾಲ್ವ್  ಅಥವಾ ಸೇಫ್ಟೀ ವಾಲ್ವ್. ಪ್ರೆಶರ್ ಕುಕ್ಕರಿನ ಮುಚ್ಚಳದ ಮೇಲೆ ಒಂದು ನಟ್ಟಿನ ತರದಂತಹ ರಚನೆ ಯಾ ವಸ್ತುವನ್ನು ನೀವು ಗಮನಿಸಿರ ಬಹುದು. ಗಮನಿಸದಿದ್ದರೆ ಈಗ ಗಮನಿಸಿ ನೋಡಿ. ಅದುವೇ ಪ್ರೆಶರ್ ವಾಲ್ವ್ ಕುಕ್ಕರಿನೊಳಗೆ ಯಾವುದೋ ಕಾರಣದಿಂದ ಒತ್ತಡ ಹೆಚ್ಚಾದರೆ ಅದರ ನಡುವೆ ಇರುವ ತೆಳುವಿನ ಭಾಗ ಒಡೆದು ಹೋಗಿ ಅದರ ಮೂಲಕ ಆವಿ ಹೊರಗೆ ಬರುತ್ತದೆ. ಈ ರೀತಿ ಇದು ಸಂಭವನೀಯ ದುರಂತವನ್ನು ತಡೆಯುತ್ತದೆ. ಇದನ್ನು ನಾವು ವಿದ್ಯುತ್ ಸರ್ಕೀಟ್‌ಗಳಲ್ಲಿ ರಕ್ಷಣೆಗೆ ಉಪಯೋಗಿಸುವ ಫ್ಯೂಸ್ ವಯರಿಗೆ ಹೋಲಿಸಬಹುದು. ಇದು ಸಕ್ಷಮವಾಗಿ ಇರಬೇಕಾದುದು ಅತಿ ಅವಶ್ಯ.


ಆದ್ದರಿಂದ ಮುಚ್ಚಳ  ತೊಳೆಯುವಾಗ ಅದರ ಅಡಿ ಭಾಗದಲ್ಲಿ ಆ ವಾಲ್ವಿನ ತೆಳು ಭಾಗ ಸರಿಯಾಗಿದೆಯೇ ಅದು ಒಡೆದು ಹೋಗದಂತೆ ತಡೆಯುವ ಯಾವುದಾದರೂ ವಸ್ತುಗಳು ಸಿಲುಕಿಕೊಂಡಿದೆಯೇ ಎಂಬುದನ್ನು ದಿನಾ ಪರೀಕ್ಷಿಸಬೇಕು. ಗಟ್ಟಿಯಾದ ಅನ್ನದ  ಅಗುಳು ಯಾ ಗೋದಿಯ ಅನ್ನ ಇತ್ಯಾದಿ ಅಂಟು ಪದಾರ್ಥಗಳು ಆ ತೆಳು ಪರದೆ ಒಡೆಯದಂತೆ ತಡೆಯೊಡ್ಡಬಹುದು.


ಇದನ್ನು ಮೂರರಿಂದ ಆರು ತಿಂಗಳಿಗೊಮ್ಮೆ ಬದಲಾಯಿಸುವುದು ಉತ್ತಮ. ನಿಮ್ಮ ಉಪಯೋಗವನ್ನನುಸರಿಸಿ ಸಮಯ ನಿರ್ಧರಿಸಿ. ಏನಿದ್ದರೂ ದಿನಾ ಸೇಫ್ಟಿ ವಾಲ್ವ್ ಅಥವಾ ಚೆಕ್ ವಾಲ್ವನ್ನು ಪರೀಕ್ಷಿಸಲು ಮರೆಯದಿರಿ. ಅತಿ ಕಡಿಮೆ ಉಪಯೋಗಿಸುವವರಾದರೂ ವರ್ಷಕ್ಕೊಮ್ಮೆ ಅದನ್ನು ಬದಲಾಯಿಸುವುದು ಉತ್ತಮ. ಅದೇನೂ ಅಂತಹ ತುಂಬಾ ಕ್ರಯದ ವಸ್ತು ಅಲ್ಲ.  


ಮೂರನೇಯದು ಗ್ಯಾಸ್ಕೆಟ್ ಎಂಬ ರಬ್ಬರ್ ವಾಷರ್. ಗ್ಯಾಸ್ಕೆಟ್ ಹಳತಾದರೆ ಮುಚ್ಚಳದ ಎಡೆಯಲ್ಲಿ ಆವಿ ಸೋರುವುದನ್ನು ಸಾಮಾನ್ಯ ಎಲ್ಲರೂ ನೋಡಿರಬಹುದು. ಇದರಿಂದಲಾಗಿ ಆವಿ ಸೋರಲು ತೊಡಗಿದ ಮೇಲೆ ಗ್ಯಾಸ್ಕೆಟ್ ಬದಲಾಯಿಸಿದರಾಯಿತು ಎಂದು ಹೆಚ್ಚಿನವರೂ ತಿಳಿದುಕೊಂಡಿರುತ್ತಾರೆ. ಆದರೆ ನೆನಪಿಡಿ ಇದು ಅಪಾಯಕ್ಕೆ ಕಾರಣವಾಗ ಬಹುದು. ಗ್ಯಾಸ್ಕೆಟ್ ಎಂಬ ರಬ್ಬರ್ ವಾಶರ್ ಅದರ ಮೃದುತ್ವವನ್ನು ಕಳೆದುಕೊಂಡು ಗಟ್ಟಿಯಾಗತೊಡಗಿದರೆ (ಹಾರ್ಡ್) ನಿರ್ದಾಕ್ಷಿಣ್ಯವಾಗಿ ಅದನ್ನು ಬದಲಾಯಿಸಿ ಬಿಡಿ. ಆಚೆಯ ಮನೆಯವರು ಐದು ವರ್ಷಗಳಿಂದ ವಾಶರ್ ಬದಲಾಯಿಸಲಿಲ್ಲ ಮತ್ತೆ ನಾನೇಕೆ ಬದಲಾಯಿಸಬೇಕೆಂಬ ಹುಂಬತನ ಬೇಡ. (ಕೆಲವು ಕಂಪೆನಿಗಳ ವಿನ್ಯಾಸದಿಂದ ಅವುಗಳಲ್ಲಿ ಗ್ಯಾಸ್ಕೆಟ್ ದೀರ್ಘ ಬಾಳಿಕೆ ಬರುತ್ತದೆ. ಅಥವಾ ಕೆಲವರ ಉಪಯೋಗ ಅತಿ ಕಡಿಮೆ ಇರಬಹುದು). ಒಂದಷ್ಟು ನಷ್ಟ ಎಂದು ಕಂಡರೂ ಗ್ಯಾಸ್ಕೆಟ್ ಗಟ್ಟಿಯಾಗ (ಹಾರ್ಡ್)  ತೊಡಗಿದಾಗ ಬದಲಾಯಿಸಲು ಉದಾಸೀನ ಮಾಡಬೇಡಿ.


ಇದೇ ರೀತಿ ಕೆಲವು ಗ್ಯಾಸ್ಕೆಟ್ ಅತಿ ಮೃದುವಾಗುತ್ತದೆ ಅಂದರೆ ಬೆಣ್ಣೆಯಂತಾಗ ತೊಡಗುತ್ತದೆ. ಆಗಲೂ ಗ್ಯಾಸ್ಕೆಟ್ ಬದಲಾಯಿಸಬೇಕು. ರಬ್ಬರ್ ಗ್ಯಾಸ್ಕೆಟ್‌ನ ಎಡೆಯಲ್ಲಿ ಆವಿ ಬರುವ ವರೆಗೆ ಕಾದು ಕುಳಿತರೆ ಅದು ಮುಚ್ಚಳ ಸಮೇತ ಸಿಡಿದು ಬೀಳುವ ಸಾಧ್ಯತೆ ಇದೆ. ಕೆಲವರು ಈ ವಾಶರ್ ದೀರ್ಘ ಬಾಳಿಕೆ ಬರಲು ದಿನಾ ರಾತ್ರಿ ನೀರಲ್ಲಿ ಇಡುವುದು ಫ್ರಿಜ್‌ನಲ್ಲಿ ಇಡುವುದು ಹೀಗೆ ಹಲವೂ ಜನ ಹೇಳುವ ಹಲವೂ ಸಲಹೆಗಳನ್ನು ಹಾಗೇ ನಡೆಸುವವರಿದ್ದಾರೆ. ಅವರ ಅನುಭವದಲ್ಲಿ ಅದು ಪ್ರಯೋಜನ ಕಂಡಿದ್ದರೆ ಸರಿ ಅದನ್ನು ಮಾಡಬಹುದು. ಆದರೆ ಸಣ್ಣ ಕ್ರಯದ ಒಂದು ವಸ್ತುವಿಗೆ ಇಷ್ಟೆಲ್ಲಾ ಕಸರತ್ತು ಮಾಡಬೇಕೇ? ಅದರ ಬದಲು ಸಮಯ ಬಂದಾಗ ವಾಶರ್ ಬದಲಾಯಿಸುವುದೇ ಉತ್ತಮವಲ್ಲವೇ? ಸಣ್ಣ ಹಣಕ್ಕಾಗಿ ಗಂಡಾಂತರ ಎಳೆದು ಕೊಳ್ಳಬೇಕೇ? ಆಯ್ಕೆ ನಿಮ್ಮದು.


ಇನ್ನು ಪ್ರೆಶರ್ ಕುಕರ್ ನ ಹಿಡಿಯ (ಕೈಗಳ) ಸ್ಕ್ರೂಗಳು ಲೂಸ್ ಆಗಿದೆಯೇ ಎಂದು ಪರೀಕ್ಷಿಸಿ ನೋಡಿಕೊಳ್ಳಿ. ಹಿಡಿ ಅಲ್ಲಾಡುವುದಿದ್ದರೆ ಕೂಡಲೇ ಅದನ್ನು ಬಿಗಿಗೊಳಿಸಿ. ಸ್ಕ್ರೂಗಳ ತ್ರೆಡ್ ಗಳು ಹೋಗಿದ್ದರೆ ಅದನ್ನು ಬದಲಾಯಿಸಿ ಬಿಡಿ. ಈ ಸ್ಕ್ರೂಗಳನ್ನು ಆಗಾಗ ಬಿಗಿ ಇದೆಯೇ ಎಂದು ಪರೀಕ್ಷಿಸಲು ಮರೆಯದಿರಿ. ಒಳಗಿರುವ ವಸ್ತುಗಳ ಸಮೇತ ಇಡೀ ಪಾತ್ರೆಯನ್ನು ಆ ಹಿಡಿಯೇ ಎತ್ತ ಬೇಕೆಂಬುದನ್ನು ನೆನಪಿಟ್ಟುಕೊಳ್ಳಿ.

ಆ ಹಿಡಿಯೇ ಗಟ್ಟಿ ಇಲ್ಲವಾದರೆ ಆ ಬಿಸಿ ಪಾತ್ರೆ ಹಿಡಿಯಿಂದ ಬೇರಾಗಿ ಬಿದ್ದರೆ ಏನಾಗಬಹುದು? ಒಂದು ಕ್ಷಣ ಯೋಚಿಸಿದರೆ ನೀವು ಆ ಸ್ಕ್ರೂ ಗಟ್ಟಿ ಇದೆಯೇ ಎಂದು ನೋಡಲು ಮರೆಯಲಾರಿರಿ.


ಪ್ರೆಶರ್ ಕುಕ್ಕರನ್ನು ಯಾವಾಗ ಬದಲಾಯಿಸಬೇಕು? ಎಷ್ಟು ಹಳತಾದಾಗ ಬದಲಾಯಿಸ ಬೇಕು? ಇದೊಂದು ಹಲವರ ಮನದಲ್ಲಿ ಉದ್ಭವಿಸುವ ಪ್ರಶ್ನೆ.


ಸಕ್ಷಮವಾಗಿರುವ ಉತ್ತಮ ಕಂಪೆನಿಯ ಕುಕ್ಕರುಗಳನ್ನು ದೀರ್ಘ ಕಾಲ ಬಳಸಬಹುದು. ಕುಕ್ಕರಿನ ಶರೀರದಲ್ಲಿ ಸೆರೆಗಳಂತಹ ರಚನೆ ಅಥವಾ ಹೊರಭಾಗದಲ್ಲಿ ಸೂಕ್ಷ್ಮವಾಗಿ ಮ್ಯಾಪ್ ಬರೆದಂತೆ ಕಾಣಲು ತೊಡಗಿದರೆ ಖಂಡಿತಾ ಆ ಕುಕ್ಕರಿನ ಉಪಯೋಗ ನಿಲ್ಲಿಸಿ. ಅದರ ಆಯುಸ್ಸು ಮುಗಿದಿದೆಯೆಂದು ಲೆಕ್ಕ ಹಾಕಿ ಅದನ್ನು ಕೂಡಲೇ ಬದಲಾಯಿಸಿಬಿಡಿ. ಕುಕ್ಕರಿನ ಆಯುಸ್ಸು ನೀವು ಅದನ್ನು ಉಪಯೋಗಿಸುವುದನ್ನು ಹೊಂದಿಕೊಂಡಿದೆ. ಹತ್ತು ವರ್ಷ ಆದ ಕೂಡಲೇ ಬದಲಾಯಿಸಿರಿ ಎಂಬ ಸೂಚನೆ ಡೀಲರ್ ಗಳು ಸಾಮಾನ್ಯವಾಗಿ ಕೊಡುತ್ತಾರೆ. ಆದರೆ ಇಂಡಾಲಿಯಂ ಆಗಲಿ, ಸ್ಟೈನ್‌ಲೆಸ್ ಸ್ಟೀಲ್ ಆಗಲಿ ಅದಕ್ಕೆ ಇಷ್ಟೇ ವರ್ಷ ಆಯುಸ್ಸು ಅಂತ ಎಲ್ಲೂ ಹೇಳಿದ ನೆನಪಿಲ್ಲ. ನಿಮ್ಮ ಪಾತ್ರೆಯ ಆರೋಗ್ಯ ನೋಡಿ ಕೊಂಡು ದೀರ್ಘ ಸಮಯದ ವರೆಗೆ ಖಂಡಿತಾ ಉಪಯೋಗಿಸಬಹುದು.

ಆದರೆ ಅದರ ಎಲ್ಲಾ ಭಾಗಗಳ ಕಾರ್ಯ ಕ್ಷಮತೆಯನ್ನು ಪರೀಕ್ಷಿಸಿಯೇ ಉಪಯೋಗಿಸ ಬೇಕೆಂಬುದನ್ನು ಮರೆಯದಿರಿ.


ತಿಂಗಳು ಎರಡು ತಿಂಗಳಿಗೊಮ್ಮೆ ಉಪಯೋಗಿಸುವವರು ಉಪಯೋಗಿಸುವುದಕ್ಕೆ ಮೊದಲು ಸ್ಟೀಮ್ ಪೈಪ್ ಮತ್ತು ಸೇಫ್ಟೀ ವಾಲ್ವ್ ಗಳನ್ನು ಪರೀಕ್ಷಿಸಿಯೇ ಉಪಯೋಗಿಸಬೇಕೆಂಬುದು ಅತಿ ಪ್ರಾಮುಖ್ಯ.


ನಮ್ಮಲ್ಲಿರುವ ಉಪಕರಣಗಳನ್ನು ಯಾವಾಗಲೂ ಯುದ್ಧಕ್ಕೆ ಹೊರಡುವ ಸೈನಿಕ ತನ್ನ ಆಯುಧಗಳನ್ನು ಸನ್ನದ್ಧವಾಗಿಡುವಂತೆ ಸನ್ನದ್ಧವಾಗಿ ಇಟ್ಟು ಕೊಂಡಲ್ಲಿ ಜರೂರಾಗಿ ಅವಶ್ಯ ಬಂದಾಗ ರಿಪೇರಿಗೆ ಓಡುವ ಸಂದರ್ಭ ಬರುವುದಿಲ್ಲ.  


ನಿಮ್ಮ ಪ್ರೆಶರ್ ಕುಕ್ಕರ್ ಸದಾ ನಿಮ್ಮ ಸೇವೆಗೆ ಮಾತ್ರ ಇರಲಿ. ಅದೆಂದೂ ನಿಮಗೆ ಅಪಾಯ ಒಡ್ಡುವ ಸ್ಪೋಟಕ ಆಗದಿರಲಿ.


ಒಂದು ಸೂಚನೆ ಕೊಡಲು ಮರೆತು ಬಿಟ್ಟೆ. ಕೇಳಿ. ಸೇಫ್ಟೀ ವಾಲ್ವ್ ಅಥವಾ ಪ್ರೆಶರ್ ವಾಲ್ವ್ ನ ಸೀಲ್ ಒಡೆದು ಹೋಗುವಾಗ ದೊಡ್ಡ ಶಬ್ಧ ಬರಬಹುದು. ನಿಮ್ಮ ಕುಕ್ಕರ್ ಸ್ವಲ್ಪ ಆಚೀಚೆ ಸರಿಯಬಹುದು. ಎತ್ತಿ ಹಾಕಿದಂತೆ ಸ್ವಲ್ಪ ಜಾಸ್ತಿಯೇ ಸರಿದು ಸ್ಟವ್ವಿನಿಂದ ಹೊರಗೆ ಬಿದ್ಧು ಹೋಗಲೂ ಸಾಕು. ಒಳಗಿದ್ದ ಪದಾರ್ಥಗಳೆಲ್ಲಾ ಗೋಡೆಯಿಂದ ಸೀಲಿಂಗ್ ವರೆಗೂ ಚೆಲ್ಲಾಡಿ ಹೋಗುವ ಸಾಧ್ಯತೆಯೂ ಇದೆ. ಇದೇನಾದರೂ ಗಾಬರಿ ಆಗಬೇಡಿ. ನಿಮ್ಮ ಜೀವ ರಕ್ಷಣೆ ಮಾಡಲು ಆ ಸೇಫ್ಟೀ ವಾಲ್ವ್‌ ತನ್ನ ಜೀವವನ್ನೇ ಬಲಿ ಕೊಡುತ್ತಿದೆ. ಆಗ ಒಂದಷ್ಟು ಸದ್ದಾಗೋದು ಒಂದಷ್ಟು ಗಲೀಜಾಗೋದು ಸಹಿಸಿ ಕೊಳ್ಳಬಹುದಲ್ವೇ?  ನಿಮ್ಮ ಜೀವಕ್ಕೆ ಅಪಾಯ ಬಾರದಂತೆ ರಕ್ಷೆ ಕೊಡುವುದರೊಂದಿಗೆ ನಿಮ್ಮ ಪ್ರೆಶರ್ ಕುಕ್ಕರಿನ ಆಯುಸ್ಸಿಗೂ ತೊಂದರೆ ಇಲ್ಲದಂತೆ ಕಾಯುವ ಆ ಸೇಫ್ಟೀ ವಾಲ್ವಿಗೊಂದು ಚರಮಾಂಜಲಿ ಅರ್ಪಿಸಿಬಿಡಿ. ಅವನ ಬದಲು‌ ಇನ್ನೊಬ್ಬನನ್ನು ಆ ಜಾಗಕ್ಕೆ ನಿಯುಕ್ತಿ ಗೊಳಿಸಿಬಿಡಿ. ಅಂದರೆ ಆ ಹಳೇ ಸೇಫ್ಟೀ ವಾಲ್ವನ್ನು ಬದಲಾಯಿಸಿ ಹೊಸದು ಹಾಕಿಬಿಡಿ. ಯಾವಾಗಲೂ ನಿಮ್ಮ ಕುಕ್ಕರಿಗೆ ಸರಿಯಾಗುವ (ಸಾಮಾನ್ಯವಾಗಿ ಇದು ಎಲ್ಲದಕ್ಕೂ ಒಂದೇ ಸೈಜ್‌ ಇರ್ತದೆ. ಆದರೆ ಹಾಗೇ ಇರ ಬೇಕೆಂದೇನೂ ಇಲ್ಲ.) ಒಂದು ಸೇಫ್ಟೀ ವಾಲ್ವ್  ನಿಮ್ಮ‌ ಮನೆಯಲ್ಲಿ ತಂದು ಇಟ್ಟು ಕೊಳ್ಳಿ. ಸಮಯಕ್ಕೆ ಓಡಾಡುವ ತೊಂದರೆ ತಪ್ಪುತ್ತದೆ.

 

ಖರೀದಿಸುವಾಗ ಉತ್ತಮ ಕಂಪೆನಿಯ (ವಿಶ್ವಾಸಾರ್ಹ) ಪ್ರೆಶರ್ ಕುಕ್ಕರನ್ನೇ ಖರೀದಿಸಿ.

ಮುಂದೆ ಯಾವ ಉಪಕರಣದ ಬಗ್ಗೆ ಲೇಖನ ಎಂದರಿಯುವ ಕುತೂಹಲವನ್ನು ಹಾಗೇ ಇಟ್ಟುಕೊಳ್ಳಿ. ಆ ಕುತೂಹಲ ಸದ್ಯಕ್ಕೆ ಕುತೂಹಲವಾಗಿಯೇ ಇರಲಿ ಆಗದೇ? 


ವಿ.ಸೂ: ಇತ್ತೀಚೆಗೆ ಪ್ರೆಶರ್ ಕುಕ್ಕರ್‌ಗಳಲ್ಲಿ ಕೂಡಾ ಆಧುನಿಕತೆ ಬಂದಿದೆ. ಪ್ರೆಶರ್ ಮೀಟರ್ ನೊಂದಿಗೆ ಬರುವ ಕುಕ್ಕರ್‌ಗಳು ಹಾಗೆಯೇ ಇನ್ನಷ್ಟು ಸುರಕ್ಷಾ ಉಪಾಯಗಳೊಂದಿಗೆ ಬರುವ ಕುಕ್ಕರ್‌ಗಳೂ ಬಂದಿದೆ.


-ಎಡನಾಡು ಕೃಷ್ಣ ಮೋಹನ ಭಟ್ಟ


(ಉಪಯುಕ್ತ ನ್ಯೂಸ್)


Visit: Upayuktha Directory- You get here You want


‘ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ


Post a Comment

1 Comments
  1. ಲೇಖನ ಉಪಯುಕ್ತವಾಗಿದೆ ಧನ್ಯವಾದಗಳು

    ನಾವು ಸುಮಾರು 35 ವರ್ಷಗಳಿಂದ ಕುಕ್ಕರನ್ನು ಉಪಯೋಗಿಸುತ್ತಿದ್ದೇವೆ

    ಆದರೆ ಸೇಫ್ಟಿ ವಾಲ್ವನ್ನು ಮೂರರಿಂದ ಆರು ತಿಂಗಳ ಅವಧಿಯಲ್ಲಿ ಬದಲಾಯಿಸಬೇಕೆಂದು ಕೇಳುತ್ತಿರುವುದು ಇದೇ ಮೊದಲು

    ಸೇಫ್ಟಿ ವಾಲ್ವ ಹಾಳಾದಾಗ ಮಾತ್ರ ನಾವು ಅದನ್ನು ಬದಲಾಯಿಸುತ್ತೇವೆ

    ನೀವು ಕೊಟ್ಟ ಇದೊಂದು ಮಾಹಿತಿ ತಪ್ಪು ಎಂದು ನನ್ನ ಅಭಿಪ್ರಾಯ

    ReplyDelete
Post a Comment
Maruti Suzuki Festival of Colours
Maruti Suzuki Festival of Colours
To Top