ಏರಲೊಂದು ಏಣಿ ಉಂಟು.
ನುಂಗಲೊಂದು ಹಾವು ಉಂಟು.
ಹಾವು ಏಣಿ ಆಟದಂತೆ
ಜೀವಕುಲವು ಬದುಕಲುಂಟು.
ದಾಳವನ್ನು ಎಸೆಯುತ್ತಿದೆ
ಅಗೋಚರದ ಶಕ್ತಿಯೊಂದು
ನಮ್ಮ ಕರ್ಮ ಫಲದಂತೆಯೆ
ಅಂಕೆ ಕಾಣುವುದೆಮಗಿಂದು.
ದಾಳವಿಹುದು ಅವನ ಕೈಲಿ
ಅಂಕೆ ಮಾತ್ರ ನಮ್ಮೆದುರಲಿ
ನಡೆಯ ನಡೆಸಿ ಬಂದ ಫಲವ
ಸವಿಯಬೇಕು ಭೋಗಿಸುತಲಿ.
ಏಣಿ ಸಿಕ್ಕಿತೆಂದುಕೊಂಡು
ಗರ್ವ ಪಟ್ಟುಕೊಳ್ಳಬೇಡ
ಹಾವು ನುಂಗಿತೆಂದುಕೊಂಡು
ಕೈಯ ಕಟ್ಟಿ ಕೂರಬೇಡ.
ಸಹಜ ಹುಟ್ಟು ಸಾವಿನಂತೆ
ಹಾವು ಏಣಿ ಆಟವಿಹುದು
ಛಲವ ಬಿಡದೆ ಆಡಬೇಕು
ಮತ್ತೆ ಗುರಿಯ ಸೇರಬೇಕು.
ಪಾಪ ಪುಣ್ಯ ಕಳೆದ ಮೇಲೆ
ಮೋಕ್ಷ ಒಂದೆ ಗತಿಯು ಎಮಗೆ
ಹಾವು ಏಣಿ ದಾಟಿದೊಡನೆ
ನಮ್ಮ ನಡೆಯು ಕೊನೆಯ ಮನೆಗೆ.
ದೃಷ್ಟ ಅದೃಷ್ಟಗಳನು
ಕೂಡಿ ಕಳೆದು ಎಣಿಸಿ ಗುಣಿಸಿ
ತಾಳಿಕೊಂಡು ಲೆಕ್ಕ ಹಾಕಿ
ಮುಂದೆ ಸಾಗುತಿರಲೆಬೇಕು.
ಈಶ ಕೊಟ್ಟ ಲೆಕ್ಕವನ್ನು
ನಿಶ್ಶೇಷದಿ ಚುಕ್ತ ಮಾಡಿ
ಮೋಕ್ಷವೆಂಬ ಗುರಿಯ ಸೇರಿ
ಇಹದಾಟವ ಮುಗಿಸಬೇಕು.
ಆಟ ಆಡಲಾರೆ ಎಂದು
ಹಟವು ಸಾಗಲಾರದಿಲ್ಲಿ
ತೃಪ್ತ ಭಾವದಿಂದ ತನುವ
ಅರ್ಪಿಸೋಣ ಈಶನಲ್ಲಿ.
*******
ಸಹಸ್ರಬುಧ್ಯೆ ಮುಂಡಾಜೆ
(ಉಪಯುಕ್ತ ನ್ಯೂಸ್)
Visit: Upayuktha Directory- You get here You want
‘ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ