ಗದಗ: ಜಿಲ್ಲೆಯ ಮುಳಗುಂದ ಮೂಲದವರಾದ ರಾಘವೇಂದ್ರ ಎಚ್ ಯಾವಗಲ್ (85) ನಿನ್ನೆ ಪುಣೆಯಲ್ಲಿ ನಿಧನರಾದರು. ಕಳೆದ ಕೆಲವು ದಿನಗಳಿಂದ ವಯೋಸಹಜ ಅನಾರೋಗ್ಯದಿಂದ ಬಳಲುತ್ತಿದ್ದ ಅವರು ಖಾಸಗಿ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದರು ಎಂದು ಕುಟುಂಬದ ಮೂಲಗಳು ತಿಳಿಸಿವೆ. ಪ್ರಾಥಮಿಕ ಶಿಕ್ಷಣ ಮುಳಗುಂದದಲ್ಲಿ, ಪ್ರೌಢ ಶಿಕ್ಷಣ ಗದಗನಲ್ಲಿ ಹಾಗೂ ರಾಸಾಯನಿಕ ಶಾಸ್ತ್ರ ವಿಷಯದಲ್ಲಿ ಸ್ನಾತಕೋತ್ತರ ಪದವಿಯನ್ನು ಧಾರವಾಡದ ಕರ್ನಾಟಕ ವಿಶ್ವವಿದ್ಯಾಲಯದಲ್ಲಿ ಪಡೆದರು. ಮಣಿಪಾಲ ವಿಶ್ವವಿದ್ಯಾಲಯದಲ್ಲಿ ಕೆಲ ಕಾಲ ಉಪನ್ಯಾಸಕರಾಗಿ ಸೇವೆ ಸಲ್ಲಿಸಿದರು. ಬಳಿಕ ಮಹಾರಾಷ್ಟ್ರ ಸರ್ಕಾರದ ವಿದ್ಯುತ್ ಉತ್ಪಾದನೆ ವಿಭಾಗದ ಉನ್ನತ ಹುದ್ದೆಯಲ್ಲಿ ಪುಣೆ, ನಾಗಪುರ ಮತ್ತು ಮುಂಬೈಯಲ್ಲಿ ಸೇವೆ ಸಲ್ಲಿಸಿ ನಿವೃತ್ತಿ ಜೀವನ ನಡೆಸುತ್ತಿದ್ದರು. ಬಾಲ್ಯದಲ್ಲಿ ಕುಸ್ತಿ ಆಟದಲ್ಲಿ ಆಸಕ್ತಿ ಹೊಂದಿದ್ದ ಅವರು ಅನೇಕ ಪಂದ್ಯಾವಳಿಯಲ್ಲಿ ಮುಳುಗುಂದವನ್ನು ಪ್ರತಿನಿಧಿಸಿದ್ದರು.
ಅವರ ಮೊದಲ ಪುತ್ರ ಡಾ.ದಿಲೀಪ ಯಾವಗಲ್ ಅಮೇರಿಕಾದ ಮಿಯಾಮಿ ವೈದ್ಯಕೀಯ ವಿಶ್ವವಿದ್ಯಾಲಯದಲ್ಲಿ ನರರೋಗ ತಜ್ಞರಾಗಿ, ಸಂಶೋಧಕರಾಗಿ ಹಾಗೂ ಉಪನ್ಯಾಸಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಎರಡನೇ ಪುತ್ರ ವಿಕ್ರಮ್ ಯಾವಗಲ್ ಪ್ರತಿಷ್ಠಿತ ಅಂತಾರಾಷ್ಟ್ರೀಯ 'ಎಸ್ ಬ್ಯಾಂಕ್' ಸಾಫ್ಟ್ವೇರ್ ವಿಭಾಗದ ಮುಖ್ಯಸ್ಥರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಪತ್ನಿ ಸುಧಾಬಾಯಿ ಯಾವಗಲ್, ಇಬ್ಬರು ಸೊಸೆಯಂದಿರು ಹಾಗೂ ನಾಲ್ವರು ಮೊಮ್ಮಕ್ಕಳನ್ನು ರಾಘವೇಂದ್ರ ಎಚ್ ಯಾವಗಲ್ ಅಗಲಿದ್ದಾರೆ. ಉದಯ ಸುದ್ದಿ ವಾಹಿನಿ ಸೇರಿದಂತೆ ಹಲವು ಮಾಧ್ಯಮಗಳಲ್ಲಿ ಸೇವೆ ಸಲ್ಲಿಸುತ್ತಿರುವ ಹಿರಿಯ ಪತ್ರಕರ್ತ ಹನುಮೇಶ್ ಕೆ ಯಾವಗಲ್ ಹಾಗೂ ಯಾವಗಲ್ ಕುಟುಂಬದ ಸದಸ್ಯರು ರಾಘವೇಂದ್ರ ಎಚ್ ಯಾವಗಲ್ ಅವರ ನಿಧನಕ್ಕೆ ಕಂಬನಿ ಮಿಡಿದಿದ್ದಾರೆ.
