ಚಿಕ್ಕ ಮಕ್ಕಳಲ್ಲಿಯೇ ಸಾಮಾಜಿಕ ಮೌಲ್ಯಗಳನ್ನು ಬೆಳೆಸುವಲ್ಲಿ ಸ್ಕೌಟ್ಸ್ ಗೈಡ್ಸ್ ಪಾತ್ರ ಮಹತ್ವದ್ದು: ಕ್ಷೇತ್ರ ಸಮನ್ವಯಾಧಿಕಾರಿ ಆರ್. ವಿಜಯಕುಮಾರ್
ಆಲೂರು: ಭಾರತ್ ಸ್ಕೌಟ್ಸ್ & ಗೈಡ್ಸ್ ಚಿಕ್ಕ ಮಕ್ಕಳಿಂದಲೇ ಸಾಮಾಜಿಕ ಮೌಲ್ಯಗಳನ್ನು ಬಿತ್ತುತ್ತಾ ಸಮಾಜಮುಖಿಯಾಗಿ ವಿಕಸನಗೊಳ್ಳಲು ಬಹುದೊಡ್ಡ ಪಾತ್ರ ವಹಿಸುತ್ತದೆ ಎಂದು ಆಲೂರು ತಾಲ್ಲೂಕು ಶಿಕ್ಷಣ ಇಲಾಖೆಯ ಕ್ಷೇತ್ರ ಸಮನ್ವಯಾಧಿಕಾರಿ ಆರ್. ವಿಜಯಕುಮಾರ್ ಅಭಿಪ್ರಾಯಪಟ್ಟರು.
ಅವರು ಆಲೂರು ಪಟ್ಟಣದ ವಿಶ್ವೇಶ್ವರಯ್ಯ ಪಬ್ಲಿಕ್ ಶಾಲೆಯಲ್ಲಿ ಭಾರತ್ ಸ್ಕೌಟ್ಸ್ & ಗೈಡ್ಸ್ ಸ್ಥಳೀಯ ಸಂಸ್ಥೆಯ ವತಿಯಿಂದ ಹಮ್ಮಿಕೊಂಡಿದ್ದ ಸಂಸ್ಥಾಪನೆ ಹಾಗೂ ಧ್ವಜ ಚೀಟಿ ಬಿಡುಗಡೆ ಕಾರ್ಯಕ್ರಮ ದಲ್ಲಿ ಗಿಡಕ್ಕೆ ನೀರೆರೆಯುವ ಮೂಲಕ ಉದ್ಘಾಟಿಸಿ ಮಾತನಾಡಿ ಹಾಸನದಲ್ಲಿ ಭಾರತ್ ಸ್ಕೌಟ್ಸ್ ಗೈಡ್ಸ್ ಎಂದಾಕ್ಷಣ ನೆನಪಿಗೆ ಬರೋದು ಹಾಸನಾಂಬ ಜಾತ್ರೆಯಲ್ಲಿ ಮಕ್ಕಳು ಮಾಡಿದ ನಿಸ್ವಾರ್ಥ ಸೇವೆ. ಇದು ಅಂತರಾಷ್ಟ್ರೀಯಮಟ್ಟದ ಸಂಘಟನೆಯಾಗಿರುವುದರಿಂದ ರಾಜ್ಯ, ದೇಶ, ವಿದೇಶಗಳಲ್ಲಿ ಸಮುದಾಯದ ಸೇವೆಯನ್ನೇ ಪ್ರಮುಖವಾಗಿ ಗುರಿಯಾಗಿಸಿಕೊಂಡು ಜೊತೆಜೊತೆಗೆ ಮಕ್ಕಳ ಸರ್ವಾಂಗೀಣ ವಿಕಸನಕ್ಕೆ ಪೂರಕವಾಗಿ ಕಾರ್ಯ ನಿರ್ವಹಿಸುತ್ತಿದೆ. ಇಂತಹ ಸಂಘಟನೆಗಳಲ್ಲಿ ಮಕ್ಕಳು ಪಾಲ್ಗೊಂಡಾಗ ಶಿಸ್ತು, ಸಂಯಮ, ಸೇವಾ ಮನೋಭಾವನೆ ಮುಂತಾದ ಮೌಲ್ಯಗಳು ವೃದ್ಧಿಯಾಗುತ್ತವೆ. ಧ್ವಜ ಚೀಟಿಗಳಿಂದ ಸಂಗ್ರಹವಾದ ಹಣವನ್ನು ಈ ಸಂಸ್ಥೆ ಸಮುದಾಯದ ಶ್ರೇಯೋಭಿವೃದ್ಧಿಗಾಗಿಯೇ ವಿನಿಯೋಗಿಸುವುದರಿಂದ ಸಾರ್ವಜನಿಕರೂ ಸಹ ಪಾಲ್ಗೊಳ್ಳಬೇಕಿದೆ ಎಂದರು.
ತಾಲ್ಲೂಕು ಸಂಸ್ಥೆಯ ಉಪಾಧ್ಯಕ್ಷರಾದ ಸಿ.ಎಸ್.ಪೂರ್ಣಿಮಾ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ 1950 ಕ್ಕಿಂತ ಮುಂಚೆ ಎರಡೂ ಪ್ರತ್ಯೇಕ ಘಟಕಗಳಾಗಿ ಸೇವೆ ಸಲ್ಲಿಸುತ್ತಿದ್ದವು. 1950 ನವೆಂಬರ್ 07 ರಂದು ಇವೆರಡೂ ಘಟಕಗಳು ವಿಲೀನಗೊಳ್ಳುವುದರ ಮೂಲಕ ಭಾರತ್ ಸ್ಕೌಟ್ಸ್ & ಗೈಡ್ಸ್ ಏಕೀಕರಣವಾಯಿತು. ಅದರ ನೆನಪಿಗಾಗಿ ಪ್ರತಿವರ್ಷ ನವೆಂಬರ್ 07 ನ್ನು ಧ್ವಜ ದಿನವನ್ನಾಗಿ ಆಚರಿಸುತ್ತೇವೆ. ನಾನು, ನನ್ನದು ಎನ್ನುವುದಕ್ಕಿಂತ ನಾವು ನಮ್ಮದು ಎಂಬ ಹೃದಯ ವೈಶಾಲ್ಯತೆಯನ್ನು ಬೆಳೆಸುವುದೇ ಸ್ಕೌಟ್ಸ್ ಗೈಡ್ಸ್ ಉದ್ದೇಶ. ಇಲ್ಲಿ ಶಿಕ್ಷಣದ ಜೊತೆಗೆ ಜೀವನ ಕೌಶಲಗಳ ಬೆಳವಣಿಗೆಯೂ ಆಗುತ್ತದೆ. ನಾಡು ನನಗೇನು ಕೊಟ್ಟಿದೆ ಎನ್ನುವುದಕ್ಕಿಂತಲೂ ನಾನು ಈ ನಾಡಿಗಾಗಿ ಏನು ಕೊಡುಗೆ ನೀಡಿದ್ದೇನೆ ಎನ್ನುವುದು ಬಹಳ ಮುಖ್ಯ. ಈ ದಿಸೆಯಲ್ಲಿ ಈ ಸಂಸ್ಥೆ ಮಕ್ಕಳನ್ನು ಸಂಕುಚಿತಗೊಳಿಸದೇ ವಿಶ್ವಮಾನವರನ್ನಾಗಿ ಮಾಡುತ್ತದೆ. ಸೇವೆಗೆ ಸದಾ ಸಿದ್ದವಾಗಿರು ಎಂಬ ಮೋಟೋದೊಂದಿಗೆ ಮಕ್ಕಳು ಸಮುದಾಯದ ಸೇವೆಗಾಗಿ ಸದಾ ಸಿದ್ದರಿರುತ್ತಾರೆ. ಸಮವಸ್ತ್ರ ಧರಿಸಿದ ವಿದ್ಯಾರ್ಥಿಗಳ ನೋಡಿದಾಗ ಉಂಟಾಗುವ ಆನಂದವೇ ವಿಶೇಷವಾದದ್ದು ಎಂದರು.
ಜಿಲ್ಲಾ ಸಹಾಯಕ ಆಯುಕ್ತ ಎಂ. ಬಾಲಕೃಷ್ಣ ಮಾತನಾಡಿ ಭಾರತ್ ಸ್ಕೌಟ್ಸ್ & ಗೈಡ್ಸ್ ಏಕೀಕರಣದ ಅಮೃತ ಮಹೋತ್ಸವ ಸಂದರ್ಭದಲ್ಲಿದ್ದೇವೆ. ಇಂದು ದೇಶದಾದ್ಯಂತ ಶಾಲಾ ಹಂತ, ತಾಲ್ಲೂಕು ಹಂತ, ಜಿಲ್ಲಾ ಹಂತ ಹಾಗೂ ರಾಜ್ಯ, ರಾಷ್ಟ್ರೀಯ ಮಟ್ಟದಲ್ಲಿಯೂ ಆಚರಣೆಯಾಗುತ್ತಿದೆ. ಒಳ್ಳೆಯ ಸದುದ್ದೇಶಹೊಂದಿದ ಈ ಕಾರ್ಯಕ್ರಮ ಮಕ್ಕಳಲ್ಲಿ ಸಾಮಾಜಿಕ ಜವಬ್ದಾರಿಯನ್ನು ಹೆಚ್ಚಿಸುತ್ತದೆ ಎಂದರು.
ವೇದಿಕೆಯಲ್ಲಿ ತಾಲ್ಲೂಕು ಕಾರ್ಯದರ್ಶಿ ಕೊಟ್ರೇಶ್ ಎಸ್. ಉಪ್ಪಾರ್, ಕ್ಷೇತ್ರ ಸಂಪನ್ಮೂಲ ವ್ಯಕ್ತಿ ಪರಮೇಶ್ ಸೇರಿದಂತೆ ಹಲವರು ಮಾತನಾಡಿದರು.ಕಬ್ ಮಾಸ್ಟರ್ ರಾಮಚಂದ್ರು, ಲೇಡಿ ಕಬ್ ಮಾಸ್ಟರ್ ಜ್ಯೋತಿ, ಶಕುಂತಲಾ ಹಾಗೂ ಗೈಡ್ ಕ್ಯಾಪ್ಟನ್ಸ್ ರೂಹಿ, ರೋಹಿಣಿ, ಭವ್ಯ ಮತ್ತು ನೂರಕ್ಕೂ ಹೆಚ್ಚು ಸ್ಕೌಟ್ಸ್ ಗೈಡ್ಸ್ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
ಉಪಯುಕ್ತ ನ್ಯೂಸ್ ಈಗ ಸ್ವದೇಶಿ ಸಾಮಾಜಿಕ ಜಾಲತಾಣ Arattai ನಲ್ಲಿ... ನಮ್ಮ ಚಾನೆಲ್‌ಗೆ ನೀವೂ ಜಾಯಿನ್ ಆಗಿ.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ



