ನ.1ರಿಂದ 10ರ ವರೆಗೆ ನಿರಂತರ 132 ಸಂಗೀತ ಕಛೇರಿಗಳು
ಕಾಸರಗೋಡು: ಪೆರಿಯಾ ಬೇಕಲಂ ಗೋಕುಲಂ ಗೋಶಾಲೆಯಲ್ಲಿ ನಾಲ್ಕನೇ ದೀಪಾವಳಿ ಸಂಗೀತೋತ್ಸವಕ್ಕೆ ನವೆಂಬರ್ 1 ನೇ ತಾರೀಖಿನಂದು ಚಾಲನೆ ದೊರೆಯಲಿದ್ದು ನ.10 ರ ವರೆಗೆ ನಿರಂತರ ಸಂಗೀತ ಸೇವೆಗಳು ನಡೆಯಲಿವೆ. ಬೆಳಿಗ್ಗೆ 9 ಗಂಟೆಯಿಂದ ಪ್ರಾರಂಭಗೊಂಡು ರಾತ್ರಿ 10 ಗಂಟೆಯವರೆಗೆ ನಡೆಯಲಿರುವ ಈ ಸಂಗೀತೋತ್ಸವದಲ್ಲಿ ಭಾರತದ ನಾನಾ ರಾಜ್ಯಗಳಿಂದಲೂ, ವಿದೇಶಗಳಿಂದಲೂ ಸಂಗೀತ ಲೋಕದ ದಿಗ್ಗಜರು ಪಾಲ್ಗೊಳ್ಳಲಿದ್ದಾರೆ.
ಕರ್ನಾಟಿಕ್ ಮತ್ತು ಹಿಂದೂಸ್ತಾನಿ ಸಂಗೀತದ ಜುಗಲ್ ಬಂದಿಯಿಂದ ಪ್ರಾರಂಭಗೊಳ್ಳುವ ಈ ಸಂಗೀತೋತ್ಸವದಲ್ಲಿ ಕರ್ನಾಟಿಕ್ ಸಂಗೀತ ತಜ್ಞರಾದ ಪಟ್ಟಾಭಿರಾಮ ಪಂಡಿತ್ ಹಾಗೂ ಹಿಂದೂಸ್ತಾನಿ ಗಾಯಕರಾದ ಕೃಷ್ಣೇಂದ್ರ ವಾಡೇಕರ್ ಪ್ರಾರಂಭದ ಕಚೇರಿಯನ್ನು ನೇರವೇರಿಸಲಿದ್ದಾರೆ. ಈ ಸಂಗೀತೋತ್ಸವದಲ್ಲಿ ಸುನೀಲ್ ಗಾರ್ಗೇಯನ್ ಚೆನ್ನೈ, ಬೆಂಗಳೂರು ಸಹೋದರರು, ಡಾ. ಎನ್. ಜೆ ನಂದಿನಿ, ಆರ್. ಕೆ ಪದ್ಮನಾಭ ಮೈಸೂರು, ಹೇರಂಭ- ಹೇಮಂತ ಸಹೋದರರು, ಕುಮರೇಶ್ ಮತ್ತು ಜಯಂತಿ ಕುಮರೇಶ್, ಲತಾಂಗಿ ಸಹೋದರಿಯರು, ಮಲ್ಲಾಡಿ ಸಹೋದರರು, ಕನ್ಯಾಕುಮಾರಿ, ಲಾಲ್ಗುಡಿ ಜಿ, ಜೆ ಆರ್ ಕೃಷ್ಣನ್, ಅಭಿಷೇಕ್ ರಘುರಾಮ್, ಜಯಂತ್ ಮುಂತಾದ ವಿಶಿಷ್ಟ ಕಲಾವಿದರು ಪಾಲ್ಗೊಳ್ಳಲಿದ್ದಾರೆ.
ಒಟ್ಟಾರೆ 10 ದಿವಸ 132 ಸಂಗೀತದ ಕಚೇರಿಗಳು ನಡೆಯಲಿವೆ. ಈ 10 ದಿವಸದ ಸಂಗೀತೋತ್ಸವದ ಸಂದರ್ಭದಲ್ಲಿ ಎಡನೀರು ಮಠಾಧಿಪತಿಗಳಾದ ಶ್ರೀ ಸಚ್ಚಿದಾನಂದ ಭಾರತೀ ಸ್ವಾಮಿಗಳು, ಉಡುಪಿ ಅದಮಾರು ಮಠಾಧಿಪತಿಗಳು, ಶ್ರೀ ರಾಮಚಂದ್ರಾಪುರ ಮಠದ ಪೀಠಾಧಿಪತಿಗಳಾದ ಶ್ರೀ ರಾಘವೇಶ್ವರ ಭಾರತೀ ಸ್ವಾಮಿಗಳು ಆಗಮಿಸಲಿದ್ದಾರೆ.
ಗೋವುಗಳಿಗೆ ಬೇಕಾಗಿ ನಡೆಸಲಾಗುವ ಈ ಸಂಗೀತೋತ್ಸವವನ್ನು ಗೋವುಗಳು ವಿಶೇಷವಾಗಿ ಆಸ್ವಾದಿಸುವುದೇ ಇಲ್ಲಿಯ ವೈಶಿಷ್ಟ್ಯವಾಗಿದೆ. ಸಂಗೀತವನ್ನು ಗೋವುಗಳು ಸ್ಪಂದಿಸುವ ಕಾರಣದಿಂದಲೇ ದೇಶ ವಿದೇಶಗಳಿಂದ ಸಂಗೀತ ತಜ್ಞರು ಇಲ್ಲಿಗೆ ಹರಿದು ಬರುತ್ತಿದ್ದಾರೆ. ಇಲ್ಲಿಗೆ ಬರುವ ಸಂಗೀತ ತಜ್ಞರಿಗೂ ಹಾಗೂ ಆಸ್ವಾದಕರಿಗೂ ಆಹಾರ ಮತ್ತು ವಸತಿಯ ವ್ಯವಸ್ಥೆಯನ್ನು ಕಲ್ಪಿಸಲಾಗುತ್ತಿದೆ.
ಗೋಕುಲಂ ಗೋಶಾಲೆಯಲ್ಲಿ 9 ಭಾರತೀಯ ಗೋ ತಳಿಗಳಾದ ಕಾಸರಗೋಡು ಗಿಡ್ಡ, ವೆಚೂರ್, ಮಲೆನಾಡ ಗಿಡ್ಡ, ಕಾಂಗೇಯಮ್, ಹಳ್ಳಿಕಾರ್, ಬರಗೂರು, ಓಂಗೋಲ್, ಗಿರ್, ಕಾಂಗ್ರೆಸ್ ಸೇರಿ 225 ದನಗಳು ಇದೆ. ಎಲ್ಲಾ ದನಗಳಿಗೂ ಹೆಸರಿಡಲಾಗಿದೆ.
ಭಾರತೀಯ ಗೋ ತಳಿಗಳನ್ನು ಸಂರಕ್ಷಣೆ ಮಾಡುವ ಜೊತೆಯಲ್ಲಿ ಭಾರತೀಯ ಕಲೆಯನ್ನು ಪೋಷಣೆ ಮಾಡಲಿಕ್ಕೆ ಬೇಕಾಗಿ" ಪರಂಪರಾ ವಿದ್ಯಾಪೀಠ" ಎಂಬ ಸಂಸ್ಥೆಯನ್ನು ರಚಿಸಿ ಅದರ ಭಾಗವಾಗಿ ನೃತ್ಯ ಸಂಗೀತಾದಿ ಕಲೆಗಳನ್ನು ಬೆಳೆಸುತ್ತಾ ಬಂದಿದ್ದಾರೆ. ಇದರ ರೂವಾರಿಗಳು ಪ್ರಸಿದ್ಧ ಜ್ಯೋತಿಷಿಗಳಾದ ಶ್ರೀ ವಿಷ್ಣು ಪ್ರಸಾದ್ ಹೆಬ್ಬಾರ್ ಮತ್ತು ಶ್ರೀಮತಿ ನಾಗರತ್ನಾ ಹೆಬ್ಬಾರ್ ದಂಪತಿಗಳು.
ಪ್ರತಿವರ್ಷ ಬೇಕಲಂ ಗೋಶಾಲೆಯಿಂದ ನೀಡಲಿರುವ "ಪರಂಪರಾ ಪ್ರಶಸ್ತಿ"ಗೆ ಈ ವರ್ಷ ಗಾನಗಂಧರ್ವ ಎಂಬ ಬಿರುದಾಂಕಿತರಾದ ಪದ್ಮವಿಭೂಷಣ ಡಾ. ಕೆ.ಜೆ ಯೇಸುದಾಸ್ ಅವರು ಭಾಜನರಾಗಿರುತ್ತಾರೆ.
"ಪರಂಪರಾ ಬಾಲಪ್ರತಿಭಾ "ಪ್ರಶಸ್ತಿಗೆ ಮೃದಂಗ ವಿದ್ವಾನ್ ಕಾರೆೃಕ್ಕುಡಿ ಮಣಿ ಅವರ ಕೊನೆಯ ಶಿಷ್ಯರಾದ ಮಾ||ಸಿದ್ಧಾಂತ್ ಅವರು ಭಾಜನರಾಗಿರುತ್ತಾರೆ. "ಪರಂಪರಾ ಗುರುರತ್ನ" ಪ್ರಶಸ್ತಿಗೆ ಗೀತಾ ಶರ್ಮ ಗುರುವಾಯೂರು ಅವರು ಭಾಜನರಾಗಿರುತ್ತಾರೆ.
ನಿರಂತರ ಅಪ್ಡೇಟ್ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ