|ಉಪಯುಕ್ತ ನ್ಯೂಸ್- ಉತ್ಪ್ರೇಕ್ಷೆಯಿಲ್ಲದ ಸುದ್ದಿಗಳ, ಲಕ್ಷಾಂತರ ಓದುಗರ ವಿಶ್ವಾಸಾರ್ಹ ಜಾಲತಾಣ | ಜಾಹೀರಾತುಗಳಿಗಾಗಿ ಸಂಪರ್ಕಿಸಿ- 7019126946
ಉಪಯುಕ್ತ ನ್ಯೂಸ್- ಉತ್ಪ್ರೇಕ್ಷೆಯಿಲ್ಲದ ಸುದ್ದಿಗಳ, ಲಕ್ಷಾಂತರ ಓದುಗರ ವಿಶ್ವಾಸಾರ್ಹ ಜಾಲತಾಣ | ಜಾಹೀರಾತುಗಳಿಗಾಗಿ ಸಂಪರ್ಕಿಸಿ- 7019126946 ಕಿರು ಕಾದಂಬರಿ: ದೊಂಬಿ- ಭಾಗ- 5

ಕಿರು ಕಾದಂಬರಿ: ದೊಂಬಿ- ಭಾಗ- 5



ಬಸ್ಯ ಈಗ ಇಪ್ಪತ್ತರ ಯುವಕ. ತಂದೆಯ ಜೊತೆಗೆ ಕೆಲಸ ಮಾಡುತ್ತಾನೆ. ಅವನಿಗೂ ಸಿಗುತ್ತದೆ ಮುನ್ನೂರ ಐವತ್ತು ರುಪಾಯಿ ದಿನಕ್ಕೆ. ವಾರ ಪೂರ್ತಿ ಕೆಲಸ ಇದೆ. ಮಾಲತಿ ಅವಳೂ ಹದಿನೇಳರ ಚೆಲುವೆ. ಬೆಳೆದ ಅಂಗ ಸೌಷ್ಟವ, ಒಮ್ಮೆ ನೋಡಿದರೆ ಮತ್ತೊಮ್ಮೆ ನೋಡಬೇಕೆನಿಸುವ ಮೋಹಕ ಮೈಕಟ್ಟು. ತಮ್ಮ ಬಾಡಿಗೆ ಮನೆಯ ಅನತಿ ದೂರದಲಿರುವ ವಸತಿ ಸಮುಚ್ಚಯಗಳಲ್ಲಿ ಸಿರಿವಂತರ ಮನೆಯಲ್ಲಿ ಸಹಾಯಕಿಯಾಗಿ ಕೆಲಸ ಮಾಡುತ್ತಾಳೆ. ಅವಳೂ ತಿಂಗಳಿಗೆ ಏನಿಲ್ಲವೆಂದರೂ ಐದೋ ಆರೋ ಸಾವಿರ ದುಡಿಯುತ್ತಾಳೆ. ಮನೆಯ ಕೆಲಸವೆಂದರೆ ಗುಡಿಸುವುದು, ಪಾತ್ರೆ ತೊಳೆಯುವುದು, ಬಟ್ಟೆಬರೆ ತೊಳೆಯುವುದು, ಅಡಿಗೆಗೆ ಸಹಾಯ ಮಾಡುವುದು, ಇತ್ಯಾದಿ. ಅದೂ ಒಂದು ಮನೆಯಲ್ಲಿ ದಿನಕ್ಕೆ ಎರಡು ಗಂಟೆಯ ಕೆಲಸ, ಒಟ್ಟು ಮೂರು ಮನೆಗಳಲ್ಲಿ  ಕೆಲಸ ಮಾಡುತ್ತಾಳೆ. ಅವಳ ಊಟ ಕಾಫಿಯು ತಾನು ಕೆಲಸಮಾಡುವ ಮನೆಯಲ್ಲಿ ನಡೆಯುತ್ತಿದೆ. ಒಂದೊಂದು ಬಾರಿ ಹೆಚ್ಹಾದ  ಊಟವನ್ನು ಕಟ್ಟಿ ಮನೆಗೂ ತರಲು ಅವಕಾಶ ಇದೆ. ಅಂದರೆ ಕುಟುಂಬದ ಒಬ್ಬ ಜವಾಬ್ದಾರಿಯುತ ಸದಸ್ಯೆ ಅವಳು.  


ಕೊಟ್ರ ಬಸ್ಯನಿಗೆ ಈಗ ಆರೋಗ್ಯ ಸರಿಯಿಲ್ಲ. ಆವಾಗಾವಾಗ ಕೆಮ್ಮು, ಊಟ ರುಚಿಸುವುದಿಲ್ಲ. ಯಾವಾಗಲೂ ನಿತ್ರಾಣ, ಕಫ ಬೇರೆ, ಸಾಧಾರಣ ಆರು ತಿಂಗಳ ಕಾಲ ರಾಜಾಜಿ ನಗರದ ಕ್ಲಿನಿಕ್ ನಿಂದ ಕೆಮ್ಮಿಗೆಂದು ಮಾತ್ರೆ, ಸಿರಪ್ ತೆಗೆದು ಕುಡಿಯುತ್ತಿದ್ದ. ಜೊತೆಗೆ ಕೆಲಸವೂ ಮಾಡುತ್ತಿದನಲ್ಲ. ಒಂದು ದಿನ ಅವನಿಗೆ ಏಳಲೂ ಕಷ್ಟವಾಯಿತು. ಆಗ ಬಸ್ಯ ತನ್ನ ತಂದೆಯನ್ನು ಶಿವಾಜಿನಗರದ  ಬೋರಿಂಗ್ ಆಸ್ಪತ್ರೆಯಲ್ಲಿ ತೋರಿಸಿದ್ದ. ಅಲ್ಲಿ ಅವರು ಅವನ ಎಕ್ಸ್ ರೇ ತೆಗೆಸಿ ಕಫ ಪರೀಕ್ಶೆ ಮಾಡಿ ಕೊಟ್ಟ ವರದಿ-- ಕೊಟ್ರ ಬಸ್ಯೈಗೆ ಕ್ಷಯ ರೋಗ ವಿದೆಯೆಂದು, ಆದರೆ ದೀರ್ಘ ಕಾಲ ಔಷಧಿ ಬೇಕೆಂದು ಬರೆದುಕೊಟ್ಟಿದ್ದರು. ಇದು ಕೊಟ್ರನಿಗೆ ಹೇಳಲಾರದ ಮಾನಸಿಕೆ ಹಿಂಸೆಯನ್ನು ತಂದು ಕೊಟ್ಟಂತಹ ವಾರ್ತೆ.  


ಕಮ್ಲಿ ಕೆಲಸ ಮಾಡುವ ಕಟ್ಟಡದ ಗಾರೆ ಕೆಲಸದವ ಕಣ್ಣ ಇಪ್ಪತ್ತು ಎರಡು ವರ್ಷದ ತರುಣ, ಸೇಲಂ ಕಡೆಯವನು. ಚಿಕ್ಕಂದಿನಿಂದಲೆ ತನ್ನ ತಂದೆ ತಾಯಿಯೊಂದಿಗೆ ಬೆಂಗಳೂರಿಗೆ ಬಂದ ಅವನು ತನ್ನ 8 ವರ್ಷಕ್ಕೆ ಗ್ಯಾರೇಜೊಂದರಲ್ಲಿ ಸಹಾಯಕನಾಗಿ ಕೆಲಸಮಾಡುತ್ತಿದ್ದ. ಆ ಗ್ಯಾರೇಜಿನಲ್ಲಿ ಒಂದೊಂದೇ ಕೆಲಸಕಲಿತು ಕೊನೆಗೆ ಫಿಟ್ಟರ್ ಹಂತಕ್ಕೂ ಬಂದ. ಆದರೆ ಈ ಪಥ ಅಷ್ಟು ಸುಲಭದ್ದಾಗಿರಲಿಲ್ಲ. ಅಲ್ಲಿಯ ಫಿಟ್ಟರುಗಳು ಎಂಟು ಒಂಬತ್ತು ಸ್ಪಾನರ್ ಕೊಡು ಎಂದರೆ ಅವನು ಕೊಡುವ ಸ್ಪಾನರ್ ನ್ ಸಂಖ್ಯೆ ತಪ್ಪಾದರೆ ಅದೇ ಸ್ಪಾನರ್ ನಿಂದ ಒದೆ ತಿನ್ನಬೇಕಾಗಿತ್ತು. ಅಂತೂ ಕೆಲಸಕ್ಕೆ ಸೇರಿದ ಆ ಎರಡು ಮೂರು ವರ್ಷಗಳು ದಿನವೂ ಒದೆ ತಿಂದು ಬರುತ್ತಿದ್ದ. ಆದರೆ ಅವನ ಅಳಲನ್ನು ಕೇಳಲು ತಾಯಿಯ ಹೊರತು ಬೇರೆ ಯಾರೂ ಇರಲಿಲ್ಲ. ತಂದೆಯೋ ಕೂಲಿ ಕೆಲಸವಾದರೆ ಸಂಜೆ ಮತ್ತೆ ಕುಡಿದು ಬಂದು ಮನೆಯಲ್ಲಿ ಗಲಾಟೆ ಪ್ರಾರಂಭ ಮಾಡಿದರೆ ಅವನ ಅಳಲನ್ನು  ಕೇಳುವವರಾರು?

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ

ಕಣ್ಣನ ಕೆಲಸ ಗ್ಯಾರೇಜ್ ನಲ್ಲಿ ಸಾಧಾರಣ ಮೂರು ವರ್ಷಗಳ ತನಕ ನಡೆದುವು, ಈಗ ಅವನಿಗೆ ಹನ್ನೊಂದು ವರ್ಷ, ನೋಡಲು ವಯಸ್ಸಿಗಿಂತ ತುಸು ದೊಡ್ಡದೇ ದೇಹ, ಬೆಳಿಗ್ಗೆ ಸೈಕಲ್ ನಲ್ಲಿ ಪೇಪರ್ ಹಾಕುವ ಕೆಲಸ ಮಾಡುತಿದ್ದ, ಕೆಲವೊಮ್ಮೆ ತಂದೆ ಕೆಲಸ ಮಾಡುವ ಕಟ್ಟಡದ  ಹತ್ತಿರ ಹೋದರೆ ಅಲ್ಲಿ ಮೇಸ್ತ್ರಿ ಅವನಿಗೆ ಸಿಗರೇಟ್ ತಂದು ಕೊಡು, ಟೀ ತಂದು ಕೊಡು ಎಂದು ಚಿಲ್ಲರೆ ಕೆಲಸ ಮಾಡಿಸುತ್ತಿದ್ದ ಮತ್ತು ಅದಕ್ಕೆ ಸಮನಾಗಿ ಏನಾದರೂ ಕಾಸು ಗಿಟ್ಟುತ್ತಿತ್ತು. ಅಂತೂ ಯಾರಿಂದಲೂ ಒದೆ ತಿನ್ನುವ ಪ್ರಮೇಯ ಬರಲಿಲ್ಲ. ಹಾಗಿರುವಾಗ  ಒಂದು ದಿನ ಕೂಲಿಗಳ ಜರೂರು ಅಗತ್ಯವಿದ್ದಾಗ ತಂದೆಯೊಡನೆ ಕಟ್ಟಡ ಕೆಲಸದಲ್ಲಿ ಕೈ ಹಾಕಿದ್ದು ಅಲ್ಲಿ ಅವ ಕೂಲಿ ಎಂದು ಗುರುತಿಸಿಕೊಂಡಿದ್ದು ಅಲ್ಲಿಂದ ಮೆಲ್ಲ ಮೆಲ್ಲನೆ ಗಾರೆ ಮೇಸ್ತ್ರಿಗೆ ಕಲಸಿದ ಸಿಮೆಂಟ್ ಕೊಡುವ ಕೆಲಸದಿಂದ ಶುರುವಾದ ಅವನ ಕಾಯಕ ತನ್ನ ಚಾಕಚಕ್ಯತೆ ಮತ್ತು ಬುದ್ದಿವಂತಿಕೆಯಿಂದ-  ಈಗ ಅವನು ಗಾರೆ ಕೆಲಸದ ಮೇಸ್ತ್ರಿ. ಸಿಮೆಂಟ್ ಹಚ್ಚುವ ಕೆಲಸ. ಈಗ ವಯಸ್ಸು ಇಪ್ಪತ್ತು. ಇಲ್ಲಿ ಅವನಿಗೆ ಪರಿಚಯವಾದುದು ಕಮ್ಲಿ ಮತ್ತು ಕೊಟ್ರಬಸಪ್ಪ. ಕೊಟ್ರ ಬಸಪ್ಪ ಈಗಲೂ ಕೂಲಿ, ಆದರೆ ದೇಹ ಪ್ರಕೃತಿ ಸರಿಯಿಲ್ಲ. ಕ್ಷಯ ರೋಗ ಅವನ ದೇಹ ಮತ್ತು ಮನಸ್ಥಿತಿಯನ್ನು ಕ್ಷಯಿಸುತ್ತಿದೆ. ಕಮಲಿ ಕಣ್ಣ ಮೇಸ್ತ್ರಿಗೆ ಕಲಸಿದ ಸಿಮೆಂಟ್ ನ್ನು ಕೊಡುವ  ಕೂಲಿ ಹೆಂಗಸು. ಒಮ್ಮೊಮ್ಮೆ ಮಾಲತಿ ತನ್ನ ಮನೆ ಮಾಲೀಕರ ಮನೆಯ ಕೆಲಸಗಳನ್ನು ಮುಗಿಸಿ ಹಿಂತಿರುಗುವಾಗ ತಾಯಿಯೊಡನೆ ಹೋಗಲೆಂದು ಕಮ್ಲಿ ಕೆಲಸಮಾಡುತ್ತಿದ್ದ ಜಾಗಕ್ಕೆ ಬರುವುದಿದೆ. ಅಲ್ಲಿ ಕಣ್ಣ ನೋಡಿದ್ದು ಈ ಬೆಳೆದ ತರುಣಿಯನ್ನು. ಮೊದಲು ಕಣ್ಣುಗಳಿಂದ ಮಾತ್ರ ಪರಿಚಯದ ನಗೆಯನ್ನು ಬೀರುತ್ತಿದ್ದ ಅವರು ಕ್ರಮೇಣ ಮಾತನಾಡಲು ಪ್ರಾರಂಭಿಸಿದರು. ಮೊದಮೊದಲು ಇದು ಒಂದು ಸಾಮಾನ್ಯ ಕ್ರಿಯೆಯಾಗಿ ಬೆಳೆದುದು ಮತ್ತೆ ಮಾಲತಿ ತಾಯಿಯನ್ನು ಕರೆದುಕೊಡು ಹೋಗಲು ಬರದಿದ್ದರೆ ಕಣ್ಣನ ಕಣ್ಣುಗಳು ಯಾರನ್ನೋ ಹುಡುಕುತಿದ್ದವು. ಕೆಲಸದ ಸಮಯ ಮುಗಿದು ಎಲರೂ ಕೈಕಾಲು ಮುಖ ತೊಳೆದು ಹೊರಡಲು ವಾದರೂ ಕಣ್ಣ ಯಾರಿಗೋ ಕಾಯುತ್ತಿದ್ದ. ಯಾರೂ ಇಲ್ಲವೆಂದರೆ ಮತ್ತೆ ಒಂದು ಗಂಟೆಯ ಬಳಿಕ ತಾನೇ ಹೊರಟು ಹೋಗುತ್ತಿದ್ದ.


ಮಾಲತಿ ಅಲ್ಲಿಯ  ಆಯಾಮಗಳನ್ನು ಸೂಕ್ಷ್ಮವಾಗಿ ಗಮನಿಸಲು ಪ್ರಾರಂಭಿಸಿದಳು. ಕೆಲವೊಮ್ಮೆ ಬೇಕೆಂದೇ ತಡವಾಗಿ ಬಂದರೆ ಅಲ್ಲಿ ಕಣ್ಣ ಮಾತ್ರ ಕಾಯುತ್ತಾ ಕುಳಿತಿರುತ್ತಿದ್ದ. ಅಲ್ಲಿ ಮುಗುಳುನಗೆಯ ವಿನಿಮಯದಿಂದ ಪ್ರಾರಂಭವಾಗಿ ಕಷ್ಟ ಸುಖಗಳ ಮಾತುಗಳನ್ನಾಡಲೂ ಪ್ರಾರಂಭ ಮಾಡಿದರು. ಬೆಳೆದ ಹುಡುಗಿಯ ದಷ್ಟ ಪುಷ್ಟವಾದ ಮೈಕಟ್ಶು, ಭರಿತ ಪ್ರಾಯದ ತರುಣಿ ಮಾಲತಿ ಕಳಿತ ಬಾಳೆ ಹಣ್ಣಂತೆ ಕಣ್ಣನಿಗೆ ಕಂಡರೆ, ಕೃಷ್ಣ ವರ್ಣದ ಉತ್ತಮ ದೇಹದಾರ್ಢ್ಯದ ಕಣ್ಣ ಅವಳಿಗೆ ಅತಿ ಮೆಚ್ಚಿನ ವ್ಯಕ್ತಿಯಾದ. ಹಾಗೆಂದು ಅವರು ಆಗಾಗ ಕದ್ದು ಮುಚ್ಚಿ ಹೋಟೆಲ್ ಸಿನೆಮ ಎಂದು ಓಡಾಡಿದ್ದಿದೆ. ಈ ವಿಷಯ ಸೂಚ್ಯವಾಗಿ ಮೊದಲಿಗೆ ಕಮ್ಲಿಗೆ ತಿಳಿದುಬಂದರೆ  ಅವಳಿಗೆ ಅದು ಒಪ್ಪಿಗೆಯಾಗಲಿಲ್ಲ. ಅವಳು ಮೊದಲಿಗೆ ಮಾಲಿಗೆ ಎಚ್ಚ್ರರಿಸಿದ್ದಿದೆ. ಮತ್ತೂ ನಿಲ್ಲದಿದ್ದಾಗ ತನ್ನ ಗಂಡನಿಗೆ ತಿಳಿಸಿದ್ದಿದೆ. ಅವಳು ಬೇಡಾ ಮಗಳೇ ಊರ ಮಂದಿ ಮುಂದೆ ನನ್ನ ಮರ್ಯಾದಿ ತೆಗೀಬ್ಯಾಡ ಎಂದು ಎದೆ ಒತ್ತಿ ಹಿಡಿದು ಹಲುಬುತ್ತಾ ಕೆಮ್ಮಿದ್ದಿದೆ. ಆದರೆ ಮಾಲತಿ ಮತ್ತು ಕಣ್ಣ ಈ ವಿಚಾರವಾಗಿ ಬಹಳ ಮುಂದೆಯೇ ಹೋಗಿದ್ದರು. ಮೊದ ಮೊದಲು ಕದ್ದು ಮುಚ್ಚಿ ಹೋಗುತ್ತಿದ್ದವರು ಈಗ ಅವರಿಗೆಲ್ಲರಿಗೂ ತಿಳಿದಂತೆ ಹೊರಗಡೆಗೆ ಹೋಗಲು ಪ್ರಾರಂಭ ಮಾಡಿದರು. ಈ ಕುರಿತು ಬಸ್ಯನೂ ಒಂದೆರಡು ಬಾರಿ ತನ್ನ ತಂಗಿ ಮಾಲಿಯನ್ನು ಎಚ್ಚ್ರರಿಸಿದ್ದಿದೆ. ಆದರೆ ಯವ್ವನದ ಪರಾಕಾಷ್ಟೆಯಲ್ಲಿ ತುಡಿಯುತ್ತಿದ್ದ ಮಾಲತಿಯ ಮಾನಸಿಕ ತುಡಿತ ಬಡಿತಗಳಿಗೆ ಕಣ್ಣನ ಆತ್ಮೀಯ ಸಂಗವೇ ಬೇಕಾಗಿತ್ತು.

(ಮುಂದುವರಿಯುವುದು)

(ಶಂಕರ ಭಟ್)



web counter

0 تعليقات

إرسال تعليق

Post a Comment (0)

أحدث أقدم